ಬಾಲಕಿಯ ಅತ್ಯಾಚಾರ: ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಉಡುಪಿ, ಜ.19: 15 ವರ್ಷ ಪ್ರಾಯದ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿ ಆಕೆ ಗರ್ಭಧರಿಸಲು ಕಾರಣವಾಗಿ, ಪ್ರಕರಣ ದಾಖಲು ಗೊಂಡ ಬಳಿಕ ಪೊಲೀಸರ ಕೈಗೂ ಸಿಗದೆ ತಲೆಮರೆಸಿಕೊಂಡು ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ಆರೋಪಿ ಬ್ರಹ್ಮಾವರ ನೀಲಾವರ ಗ್ರಾಮದ ಸಂತೋಷ್ ಶೆಟ್ಟಿ (28) ಎಂಬಾತನ ಜಾಮೀನು ಅರ್ಜಿಯನ್ನು ನ್ಯಾಯಾಧೀಶರು ವಜಾಗೊಳಿಸಿದ್ದಾರೆ.
ಕಳೆದ ವರ್ಷ ಉಡುಪಿ ಮಹಿಳಾ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ನ್ಯಾಯಾಧೀಶರ ಮುಂದೆ ಬಾಲಕಿ ನೀಡಿದ ಹೇಳಿಕೆ ಹಾಗೂ ಡಿಎನ್‌ಎ ಪರೀಕ್ಷೆಯಲ್ಲಿ ಕೃತ್ಯ ನಡೆಸಿದ್ದ ಬಗ್ಗೆ ಬಂದ ಪೂರಕ ವರದಿಯನ್ನು ಆಧರಿಸಿ ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ (ಪೋಕ್ಸೋ) ವಿಜಯ ವಾಸು ಪೂಜಾರಿ ವಾದ ಮಂಡಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಟಿ. ವೆಂಕಟೇಶ ನಾಯ್ಕಾ ಅವರು ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸುವ ಸಾಧ್ಯತೆ ಇದೆ.