ಗೇರುತೋಟದಲ್ಲಿ ಮತ್ತೆ ಎಂಡೋ ಸಿಂಪಡಣೆ ಇಲ್ಲ: ನಿಗಮದ ಅಧ್ಯಕ್ಷರ ಸ್ಪಷ್ಟಣೆ
ಮಂಗಳೂರು, ಜ.19: ರಾಜ್ಯ ಗೇರು ಅಭಿವೃದ್ಧಿ ನಿಗಮದ ಗೇರು ನೆಡುತೋಪುಗಳಿಗೆ ಎಂಡೋಸಲ್ಫಾನ್ ಕೀಟನಾಶಕವನ್ನು ಸಿಂಪರಣೆ ಮಾಡುವುದನ್ನು 2000ನೆ ಇಸವಿಯಿಂದಲೇ ಸ್ಥಗಿತಗೊಳಿಸಲಾಗಿದೆ. ಇದೀಗ ನಿಗಮದಿಂದ ಯಾವುದೇ ಕೀಟನಾಶಕವನ್ನು ಸಿಂಪರಣೆ ಮಾಡಲಾಗುತ್ತಿಲ್ಲ ಎಂದು ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್ ತಿಳಿಸಿದ್ದಾರೆ.
‘ಗೇರು ತೋಟಗಳಲ್ಲಿ ಮತ್ತೆ ಎಂಡೋ ಛಾಯೆ’ ಎಂಬ ಶೀರ್ಷಿಕೆಯಡಿ ಗುರುವಾರ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ಸುದ್ದಿಗೆ ಸ್ಪಷ್ಟಣೆ ನೀಡಿರುವ ಅವರು, ನಿಗಮದ ಗೇರು ನೆಡುತೋಪುಗಳನ್ನು ಇ-ಟೆಂಡರ್ ಮೂಲಕ ಸಫಲ ಗುತ್ತಿಗೆದಾರರಿಗೆ ಗೇರು ಫಲೋತ್ಪನ್ನಗಳನ್ನು ಸಂಗ್ರಹಿಸಲು ಪ್ರತೀ ವರ್ಷ ಡಿಸೆಂಬರ್-ಜನವರಿ ತಿಂಗಳಲ್ಲಿ ವಿಕ್ರಯಿಸಲಾಗುತ್ತದೆ. ಈ ಗೇರು ನೆಡುತೋಪುಗಳನ್ನು ಹರಾಜು ಮೂಲಕ ಪಡೆದುಕೊಂಡ ಗುತ್ತಿಗೆದಾರರು ಯಾವುದಾದರು ಕೀಟನಾಶಕವನ್ನು ಸಿಂಪರಣೆ ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ಸಂಬಂಧಪಟ್ಟ ವಿಭಾಗೀಯ ವ್ಯವಸ್ಥಾಪಕರಿಗೆ ವಿಚಾರಣೆ ನಡೆಸಿ ಕ್ರಮಕೈಗೊಳ್ಳಲು ಮತ್ತು ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.