ಯಕ್ಷಗಾನ ತಾಳಮದ್ದಳೆಯಿಂದ ಸಂಸ್ಕೃತಿ ಪರಂಪರೆಗಳ ಅರಿವು : ಶಾರದಾ ದುರ್ಗಪ್ಪ ಗುಡಿಗಾರ
ಭಟ್ಕಳ, ಜ.19 : ಯಕ್ಷಗಾನ ತಾಳಮದ್ದಳೆಯಿಂದ ಸಂಸ್ಕೃತಿ ಪರಂಪರೆಗಳ ಅರಿವುಂಟಾಗುತ್ತದೆಯಲ್ಲದೇ ಪುರಾಣ ಇತಿಹಾಸಗಳ ತಿಳುವಳಿಕೆ ಮೂಡುತ್ತದೆ ಎಂದು ಶಾರದಾ ದುರ್ಗಪ್ಪ ಗುಡಿಗಾರ ತಿಳಿಸಿದರು.
ಅವರು ಗುರುಸುಧೀಂದ್ರ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತರು, ಮತ್ತು ಸುಧಿಂದ್ರ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ ಯಕ್ಷಗಾನ ತಾಳಮದ್ದಳೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಟ್ಕಳದಲ್ಲಿ ಸಾಹಿತ್ಯ ಪರಿಷತ್ತು ಕಾಲೇಜು ವಿಧ್ಯಾರ್ಥಿಗಳಲ್ಲಿ ಯಕ್ಕಗಾನ ತಾಳಮದ್ದಳೆಯ ಆಸಕ್ತಿಯನ್ನು ಬೆಳೆಸಲು ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಯಕ್ಷಗಾನ ತರಬೇತಿಯನ್ನು ಆಸಕ್ತರಿಗೆ ಭಟ್ಕಳದಲ್ಲಿ ತರಬೇತಿ ನೀಡುವ ವ್ಯವಸ್ಥೆಯಾಗಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸುಧೀಂದ್ರ ಕಾಲೇಜಿನ ಪ್ರಾಚಾರ್ಯ ವಿರೇಂದ್ರ ಶಾನಭಾಗ ಮಾತನಾಡಿ , ಇಂದಿನ ದಿನಗಳಲ್ಲಿ ಮೌಲ್ಯಗಳನ್ನು ಬೆಳೆಸುವಂತಹ, ಸಂಸ್ಕಾರವನ್ನು ಬೆಳೆಸುವಂತಹ ತಾಳಮದ್ದಳೆಯನ್ನು ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿರುವುದು ಅತ್ಯಂತ ಸೂಕ್ತ. ಇದರಿಂದ ಮನರಂಜನೆಯ ಜೊತೆಗೆ ಮೌಲ್ಯಗಳನ್ನೂ ಬೆಳೆಸಲು ಸಹಾಯಕ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಪ್ರಾಸ್ಥಾವಿಕ ನುಡಿಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು.
ನಂತರ ಶ್ರೀಕೃಷ್ಣ ಸಂಧಾನ ತಾಳಮದ್ದಳೆಯಲ್ಲಿ ಕೃಷ್ಣನಾಗಿ ಎಮ್.ಪಿ.ಬಂಢಾರಿ, ಕೌರವನಾಗಿ ಪ್ರಸಾದ ಪೂಜಾರಿ, ವಿಧುರನಾಗಿ ಗಣಪತಿ ಕಾಯ್ಕಿಣಿ ಮುಂತಾದವರು ಅರ್ಥಧಾರಿಗಳಾಗಿ ಕಾರ್ಯ ನಿರ್ವಹಿಸಿದರೆ ಬಾಲಕೃಷ್ಣ ಹಿಲ್ಲೋಡಿ ಭಾಗವತರಾಗಿ ,ನರಸಿಂಹ ಹೆಗಡೆ ಮೂರೂರು ಮದ್ದಳೆಯಲ್ಲಿ ಸಹಕರಿಸಿದರು.
ನಂತರ ಕಾಲೇಜು ವಿಧ್ಯಾರ್ಥಿಗಳು ತಾಳಮದ್ದಳೆಯ ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿಧ್ಯಾರ್ಥಿಗಳು ಹಾಗು ಉಪನ್ಯಾಸಕ ಫಣಿಯಪ್ಪಯ್ಯ ಹೆಬ್ಬಾರ, ಗಥಪಾಲಕಿ ರಶ್ಮಿ ನಾಯ್ಕ, ಪಾಂಡುರಂಗ ನಾಯ್ಕ, ಮಂಜು ನಾಯ್ಕ ಮುಂತಾದವರು ಉಪಸ್ಥಿತರಿದ್ದರು.