ಜಲ್ಲಿಕಟ್ಟು: ಅಧ್ಯಾದೇಶ ಜಾರಿಗೆ ಮೋದಿ ಪರೋಕ್ಷ ನಕಾರ
ಹೊಸದಿಲ್ಲಿ,ಜ.19: ಗುರುವಾರ ಇಲ್ಲಿ ತನ್ನನ್ನು ಭೇಟಿಯಾಗಿ ಜಲ್ಲಿಕಟ್ಟು ನಿಷೇಧ ವಿಷಯದಲ್ಲಿ ಕೇಂದ್ರದ ಹಸ್ತಕ್ಷೇಪವನ್ನು ಕೋರಿದ ತಮಿಳುನಾಡು ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಅವರಿಗೆ ವಿಷಯವು ವಿಚಾರಣಾಧೀನವಾಗಿದೆ ಎಂದು ತಿಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಈ ಕ್ರೀಡೆಗೆ ಅವಕಾಶ ಕಲ್ಪಿಸಿ ಅಧ್ಯಾದೇಶವನ್ನು ಹೊರಡಿಸಲು ಸರಕಾರಕ್ಕೆ ಸಾಧ್ಯವಿಲ್ಲ ಎಂಬ ಸೂಚನೆಯನ್ನು ನೀಡಿದರು.
ಜಲ್ಲಿಕಟ್ಟು ಕ್ರೀಡೆಯ ಸಾಂಸ್ಕೃತಿಕ ಮಹತ್ವವನ್ನು ಪ್ರಧಾನಿಯವರು ಮೆಚ್ಚಿಕೊಂಡರಾದರೂ,ಸದ್ಯಕ್ಕೆ ಈ ವಿಷಯವು ವಿಚಾರಣಾಧೀನವಾಗಿದೆ ಎಂದು ಬೆಟ್ಟು ಮಾಡಿದರು ಎಂದು ಭೇಟಿಯ ಬಳಿಕ ತಿಳಿಸಿದ ಪ್ರಧಾನಿ ಕಚೇರಿಯು, ರಾಜ್ಯ ಸರಕಾರವು ತೆಗೆದುಕೊಳ್ಳುವ ಕ್ರಮಗಳನ್ನು ಕೇಂದ್ರವು ಬೆಂಬಲಿಸುತ್ತದೆ ಎಂದು ಹೇಳಿತು.
ಜಲ್ಲಿಕಟ್ಟು ಮೇಲಿನ ನಿಷೇಧವನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ರಾಜ್ಯಾದ್ಯಂತ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಅಧ್ಯಾದೇಶವನ್ನು ಹೊರಡಿಸುವಂತೆ ಮೋದಿಯವರನ್ನು ಕೋರಿಕೊಳ್ಳಲು ಪನ್ನೀರ್ ಸೆಲ್ವಂ ನಿನ್ನೆ ರಾತ್ರಿಯೇ ದಿಲ್ಲಿಗೆ ಆಗಮಿಸಿದ್ದರು.