ಮೆಕ್ಸಿಕನ್ ಡ್ರಗ್ ದೊರೆ ಎಲ್ ಚಾಪೋ ಅಮೆರಿಕಕ್ಕೆ ಗಡೀಪಾರು
ನ್ಯೂಯಾರ್ಕ್, ಜ.20: ಕುಖ್ಯಾತ ಮೆಕ್ಸಿಕನ್ ಡ್ರಗ್ ದೊರೆ ಎಲ್ ಚಾಪೋ ಗರ್ ಮ್ಯಾನ್ ನನ್ನು ಉತ್ತರ ಮೆಕ್ಸಿಕೋದ ಕಾರಾಗೃಹವೊಂದರಿಂದ ಅಮೆರಿಕಕ್ಕೆ ಗಡೀಪಾರು ಮಾಡಲಾಗಿದೆ. ಜನವರಿ 2016ರಲ್ಲಿ ಚಾಪೋನ ಬಂಧನವಾಗುವ ತನಕ ಆತ ಜಗತ್ತಿನ ಅತ್ಯಂತ ಬೇಕಾಗಿದ್ದ ಡ್ರಗ್ ದೊರೆಯಾಗಿದ್ದ. ಇದಕ್ಕೂ ಆರು ತಿಂಗಳ ಮೊದಲು ಆತ ಮಧ್ಯ ಮೆಕ್ಸಿಕೋದ ಹೈ-ಸೆಕ್ಯುರಿಟಿ ಕಾರಾಗೃಹವೊಂದರೊಳಗೆ 1.5 ಕಿಮೀ ಉದ್ದದ ಸುರಂಗ ನಿರ್ಮಿಸಿ ಪರಾರಿಯಾಗಿದ್ದ.
ಗಡೀಪಾರು ಶಿಕ್ಷೆಯ ವಿರುದ್ಧ ಚಾಪೊ ವಕೀಲರು ಮಾಡಿದ್ದ ಅಪೀಲನ್ನು ನ್ಯಾಯಾಲಯ ತಿರಸ್ಕರಿಸಿದ ನಂತರ ಆತನನ್ನು ಗಡೀಪಾರು ಮಾಡಲಾಗಿದೆ.
ಸಿನಲೋವಾ ಕಾರ್ಟೆಲ್ ಎಂಬ ಸಂಘಟಿತ ಕ್ರೈಂ ಸಿಂಡಿಕೇಟ್ ನಾಯಕತ್ವ ವಹಿಸಿದ್ದ ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ಹೂಡಲಾಗುವುದು ಎಂದು ಅಮೆರಿಕಾದ ನ್ಯಾಯ ಇಲಾಖೆ ತಿಳಿಸಿದೆ.
ಅಲ್ ಚಾಪೊನನ್ನು ಎಲ್ ಪಾಸೊ, ಟೆಕ್ಸಾಸ್ ನಗರದಲ್ಲಿ ಅಮೆರಿಕಾದ ಡ್ರಗ್ ಎನ್ಫೋರ್ಸ್ ಮೆಂಟ್ ಆಡಳಿತವು ತನ್ನ ವಶಕ್ಕೆ ತೆಗೆದುಕೊಂಡು ಅಲ್ಲಿಂದ ಅತನನ್ನು ನ್ಯೂಯಾರ್ಕ್ ಗೆ ವಿಮಾನದಲ್ಲಿ ಕರೆದೊಯ್ಯಲಾಯಿತು. ನ್ಯೂಯಾರ್ಕ್,ಸ್ಯಾನ್ ಡೀಗೊ, ಚಿಕಾಗೋ, ಮಿಯಾಮಿ ಮುಂತಾದ ಆರು ಕಡೆಗಳ ಪ್ರಕರಣಗಳ ಸಂಬಂಧ ಆತನ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಆತನ ಡ್ರಗ್ಸ್ ಜಾಲದಲ್ಲಿ ಸಾವಿರಾರು ಸದಸ್ಯರಿದ್ದು ಈ ಜಾಲ ಮಾಡಿ ಪಡೆದ ಕೋಟ್ಯಂತರ ಹಣವನ್ನು ಮತ್ತೆ ಮೆಕ್ಸಿಕೋಗೆ ಹರಿಸಲಾಗುತ್ತಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಬಾಡಿಗೆ ಜನರ ಮೂಲಕ ಚಾಪೊನ ಸಿನಾಲೋವ ಕಾರ್ಟೆಲ್ ಕೊಲೆ,ಹಿಂಸೆ ಹಾಗೂ ಅಪಹರಣಗಳನ್ನು ನಡೆಸುತ್ತಿತ್ತು.