×
Ad

ಅಕ್ಷರ ದಾಸೋಹ ನೌಕರರಿಂದ ಮುಷ್ಕರ;ಕನಿಷ್ಟ ವೇತನ ಜಾರಿಗೆ ಆಗ್ರಹ

Update: 2017-01-20 15:03 IST

ಮಂಗಳೂರು,ಜ.20: ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ದ.ಕ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಬಿಸಿಯೂಟ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಗರದಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಮುಷ್ಕರ ನಡೆಯಿತು.

ಅಕ್ಷರ ದಾಸೋಹ ಯೋಜನೆಗೆ ಕಡಿತವಾಗಿರುವ 3ಲಕ್ಷ ಕೋಟಿ ಅನುದಾನವನ್ನು ವಾಪಾಸು ನೀಡಬೇಕು, ಬಿಸಿಯೂಟ ನೌಕರರನ್ನು ದುಡಿಯುವ ಕಾರ್ಮಿಕರೆಂದು ಪರಿಗಣಿಸಿ ಅವರಿಗೆ ಕನಿಷ್ಟ ವೇತನ ಹಾಗೂ ನಿವೃತ್ತಿ ಸೌಲಭ್ಯ ನೀಡಬೇಕು,ನೌಕರರನ್ನು ಖಾಯಾಂಗೊಳಿಸಿ ಅವರಿಗೆ ಸಾಮಾಜಿಕ ಭದ್ರತೆಯ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಅಕ್ಷರ ದಾಸೋಹ ಯೋಜನೆಯನ್ನು ಖಾಸಗಿ ಸಂಸ್ಥೆಗಳ ಕೈಗಳಿಗೆ ನೀಡಲು ಸರಕಾರ ಹೊರಟಿರುವುದು ಸರಿಯಲ್ಲ.ಸುಮಾರು 25 ಲಕ್ಷ ಜನ ಈ ಯೋಜನೆಯಲ್ಲಿ ಯಾವುದೇ ಸಾಮಾಜಿಕ ಭದ್ರತೆ ಇಲ್ಲದೆ ದುಡಿಯುತ್ತಿದ್ದಾರೆ.ಅವರಿಗೆ ಸರಕಾರ ಕನಿಷ್ಠ ವೇತನ ನಿಗದಿ ಪಡಿಸಬೇಕು ಎಂದು ಜಿಲ್ಲಾ ಸಮಿತಿಯ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ ತಿಳಿಸಿದ್ದಾರೆ.

ರಾಜ್ಯದಲ್ಲಿದ್ದ ಹಿಂದಿನ ಸರಕಾರ ಅಕ್ಷರ ದಾಸೋಹ ನೌಕರರ ವೇತನದ ಹೆಚ್ಚಳದ ಭರವಸೆ ಈಡೇರಿಸಿಲ್ಲ ಈಗಿನ ಸರಕಾರವೂ ಈ ಬಗ್ಗೆ ಕ್ರಮ ಕೈ ಗೊಂಡಿಲ್ಲ.ಅಕ್ಷರ ದಾಸೋಹ ಯೋಜನೆಗೆ 3ಲಕ್ಷ ಕೋಟಿ ರೂ ಕಡಿತ ಮಾಡಿರುವುದು ಸರಕಾರದ ಬಡ ನೌಕರರ ಹಾಗೂ ಬಡವರ ವಿರೋಧಿಯಾದ ಧೋರಣೆಯಾಗಿದೆ ಎಂದು ಸಿಐಟಿಯು ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ತಿಳಿಸಿದರು. ಅಕ್ಷರ ದಾಸೋಹ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಲು ಸಂಸದರಿಗೆ ಮನವಿ ಮಾಡಿದರೂ ಯಾವೂದೇ ಸ್ಪಂದನ ಇಲ್ಲ. ಸರಕಾರದ ಈ ಧೋರಣೆ ವಿರೋಧಿಸಿ ಬೆಂಗಳೂರಿನಲ್ಲಿ ಜನವರಿ 31ವಿಧಾನ ಸೌಧ ಚಲೋ ನಡೆಯಲಿದೆ ಎಂದು ದ.ಕ ಜಿಲ್ಲಾ ಸಿಐಟಿಯು ಉಪಾಧ್ಯಕ್ಷ ವಸಂತ ಆಚಾರಿ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಖಜಾಂಜಿ ಭವ್ಯಾ,ಪ್ರಧಾನ ಕಾರ್ಯದರ್ಶಿ ಗಿರಜಾ,ಸಿಐಟಿಯು ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್,ಯೋಗೀಶ್ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News