ರೈಲ್ವೆ ಬಜೆಟ್ ವಿಲೀನಕ್ಕೆ ರಾಷ್ಟ್ರಪತಿ ಅಸ್ತು
ಹೊಸದಿಲ್ಲಿ, ಜ.20: ಕೇಂದ್ರ ಬಜೆಟ್‌ನೊಂದಿಗೆ ರೈಲ್ವೆ ಬಜೆಟ್‌ನ್ನು ವಿಲೀನಗೊಳಿಸಲು ಅವಕಾಶ ಮಾಡಿಕೊಡುವುದಕ್ಕಾಗಿ ಸರಕಾರದ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡುವುದಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಶುಕ್ರವಾರ ಅನುಮೋದನೆ ನೀಡಿದ್ದಾರೆ. ಸಂಪುಟ ಕಾರ್ಯದರ್ಶಿಯವರು ಇತ್ತೀಚೆಗೆ ಹೊರಡಿಸಿದ ಅದೇಶದನ್ವಯ ರೈಲು ಬಜೆಟ್‌ನ್ನು ಒಳಗೊಂಡ ಕೇಂದ್ರ ಬಜೆಟನ್ನು ಸಿದ್ಧಪಡಿಸುವುದಕ್ಕೆ ಸಂಬಂಧಿಸಿದ ಕಾರ್ಯವನ್ನು ಆರ್ಥಿಕ ವ್ಯವಹಾರಗಳ ಇಲಾಖೆಗೆ ವಹಿಸಲಾಗಿದೆ. ಈ ಹಿಂದೆ ರೈಲ್ವೆ ಬಜೆಟನ್ನು ರೈಲ್ವೆ ಇಲಾಖೆಯೇ ತಯಾರಿಸುತ್ತಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ( ಕಾರ್ಯನಿರ್ವಹಣೆ ಹಂಚಿಕೆ) ನಿಯಮಾವಳಿಗಳಿಗೆ ತಿದ್ದುಪಡಿತರಲು ರಾಷ್ಟ್ರತಿಯವರು ಒಪ್ಪಿಗೆ ನೀಡಿದ್ದು, ವಿತ್ತ ಇಲಾಖೆಯು ಈ ಎರಡೂ ಬಜೆಟ್‌ಗಳನ್ನು ಸಿದ್ಧಪಡಿಸಲಿದೆ. 2017-18ನೆ ವಿತ್ತ ವರ್ಷದಿಂದ ಸಾಮಾನ್ಯ ಬಜೆಟ್ ಜೊತೆಗೆ ರೈಲ್ವೆ ಬಜೆಟನ್ನು ವಿಲೀನಗೊಳಿಸುವ ಮಹತ್ವದ ಸುಧಾರಣೆಗೆ ಕೇಂದ್ರ ಸರಕಾರವು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಅನುಮೋದನೆ ನೀಡಿತ್ತು. ರೈಲ್ವೆ ಬಜೆಟನ್ನು ಪ್ರತ್ಯೇಕವಾಗಿ ಮಂಡಿಸುವ ಸಂಪ್ರದಾಯ 1924ರಲ್ಲಿ ಆರಂಭಗೊಂಡಿದ್ದು, ಅದು ಸ್ವಾತಂತ್ರದ ಆನಂತರ ವರ್ಷಗಳಲ್ಲಿಯೂ ಮುಂದುವರಿಯುತ್ತಾ ಬಂದಿದೆ. 2017-18ನೆ ಸಾಲಿನ ಕೇಂದ್ರ ಬಜೆಟ್ ಫೆಬ್ರವರಿ 1ರಂದು ಮಂಡನೆಯಾಗಲಿದೆ.