ಜಲ್ಲಿಕಟ್ಟು ನಿಷೇಧ ರದ್ದತಿಗೆ ತಮಿಳ್ನಾಡಿನಿಂದ ಶೀಘ್ರ ಆಧ್ಯಾದೇಶ
ಹೊಸದಿಲ್ಲಿ,ಜ.20: ಸಾಂಪ್ರದಾಯಿಕ ಗೂಳಿಕಾಳಗ ಕ್ರೀಡೆ ಜಲ್ಲಿಕಟ್ಟುಗೆ ಸುಪ್ರೀಂಕೋರ್ಟ್ ನಿಷೇಧ ವಿಧಿಸಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಭುಗಿಲೆದ್ದಿರುವ ಪ್ರತಿಭಟನೆಯನ್ನು ಶಮನಗೊಳಿಸುವ ಪ್ರಯತ್ನಕ್ಕೆ ಮುಂದಾಗಿರುವ ರಾಜ್ಯ ಸರಕಾರವು, ಜಲ್ಲಿಕಟ್ಟು ನಡೆಸುವುದಕ್ಕೆ ಅವಕಾಶ ಮಾಡಿಕೊಡಲು ಒಂದೆರಡು ದಿನಗಳಲ್ಲಿ ಅಧ್ಯಾದೇಶವೊಂದನ್ನು ಜಾರಿಗೊಳಿಸುವುದಾಗಿ ಹೇಳಿದೆ ಹಾಗೂ ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ಅಧ್ಯಾದೇಶದ ಕರಡು ಪ್ರತಿಯೊಂದನ್ನು ಸಲ್ಲಿಸಿರುವುದಾಗಿ ತಿಳಿಸಿದೆ.
ಹೊಸದಿಲ್ಲಿಯಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಜೊತೆ ಚರ್ಚಿಸಿದ್ದ ಪನ್ನೀರ್‌ಸೆಲ್ವಂ, ಈ ಬಗ್ಗೆ ಕಾನೂನುತಜ್ಞರ ಜೊತೆ ಸಮಾಲೋಚನೆಗಳನ್ನು ಕೂಡಾ ನಡೆಸಿದ್ದರು. ಇಂದು ಚೆನ್ನೈನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿಯವರು, ರಾಜ್ಯದಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡಲು ತಮಿಳುನಾಡು ಸರಕಾರವು ಕೇಂದ್ರದ ಬೆಂಬಲೊಂದಿಗೆ, ಪ್ರಾಣಿಗಳ ಮೇಲಿನ ಹಿಂಸೆ ತಂಡೆ ಕುರಿತ ಕಾಯ್ದೆಗೆ ತಿದ್ದುಪಡಿ ತರಲಿದೆಯೆಂದು ಹೇಳಿದರು. ಈ ಸಾಂಪ್ರದಾಯಿಕ ಗೂಳಿ ಕಾಳಗ ಕ್ರೀಡೆಗೆ ಒಂದೆರಡು ದಿನಗಳಲ್ಲಿ ಅನುಮತಿ ದೊರೆಯಲಿದ್ದು, ಜನತೆ ತಮ್ಮ ಮುಷ್ಕರವನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಕಾಯ್ದೆಗೆ ತಿದ್ದುಪಡಿಯನ್ನು ಮಾಡಲು ಅಧ್ಯಾದೇಶವೊಂದನ್ನು ಹೊರಡಿಸಲು ಸರಕಾರ ನಿರ್ಧರಿಸಿದೆ. ಈ ಅಧ್ಯಾದೇಶದ ಕರಡನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿಕೊಡಬೇಕಾಗಿದ್ದು, ಆನಂತರ ಅದು ರಾಷ್ಟ್ರಪತಿಯವರಿಂದ ಅನುಮೋದನೆಗೊಳ್ಳಬೇಕಿದೆ ಎಂದರು.ರಾಷ್ಟ್ರಪತಿಯವರ ಆದೇಶದ ಬಳಿಕ ತಮಿಳುನಾಡು ರಾಜ್ಯಪಾಲರು ಈ ವಿಷಯವಾಗಿ ಸುಗ್ರೀವಾಜ್ಞೆಯೊಂದನ್ನು ಜಾರಿಗೊಳಿಸುವರು ಎಂದು ಪನ್ನೀರ್ ಸೆಲ್ವಂ ತಿಳಿಸಿದರು. ರಾಜ್ಯದಲ್ಲಿ ಜಲ್ಲಿಕಟ್ಟು ಕ್ರೀಡೆಯು ನಡೆಯುವಂತಾಗಲು ತಮಿಳುನಾಡು ಸರಕಾರವು ಕಾನೂನಿನಡಿ ಕೈಗೊಳ್ಳುವ ಯಾವುದೇ ಕ್ರಮಗಳನ್ನು ಸ್ವಾಗತಿಸುವುದಾಗಿ ಅವರು ಹೇಳಿದ್ದಾರೆ.
ಎಡಿಎಂಕೆ ಸಂಸದರಿಂದ ರಾಜ್‌ನಾಥ್ ಭೇಟಿ
ಹೊಸದಿಲ್ಲಿ,ಜ.20: ಎಡಿಎಂಕೆ ಪಕ್ಷದ ಸಂಸದರು ಶುಕ್ರವಾರ ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ಸಿಂಗ್ ಅವರನ್ನು ಭೇಟಿಯಾಗಿ ಜಲ್ಲಿಕಟ್ಟು ಕ್ರೀಡೆ ನಡೆಯುವುದಕ್ಕೆ ಅವಕಾಶ ಮಾಡಿಕೊಡಲು ಅಧ್ಯಾದೇಶವೊಂದನ್ನು ಹೊರಡಿಸುವಂತೆ ಆಗ್ರಹಿಸಿದರು. ಸಂಸದರನ್ನು ಸಮಾಧಾನಪಡಿಸಿದ ರಾಜ್‌ನಾಥ್‌ಸಿಂಗ್, ಮುಂದಿನ ಕೆಲವು ದಿನಗಳಲ್ಲಿ ತಮಿಳುನಾಡು ಸರಕಾರವು ತಮಿಳುನಾಡು ಸರಕಾರವು ಈ ಬಗ್ಗೆ ಅಧ್ಯಾದೇಶವೊಂದನ್ನು ಪ್ರಕಟಿಸಲು ಸಾಧ್ಯವಾಗುವಂತೆ ಕೇಂದ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಲೋಕಸಭಾ ಉಪಸ್ಪೀಕರ್ ಎಂ.ತಂಬಿದೊರೈ ಎಡಿಎಂಕೆ ಸಂಸದರ ನಿಯೋಗದ ನೇತೃತ್ವ ವಹಿಸಿದ್ದರು. ಜಲ್ಲಿಕಟ್ಟು ಮೇಲಿನ ನಿಷೇಧವು ತಮಿಳುನಾಡು ಜನತೆಯ ಮೂಲಭೂತ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳಿಗೆ ವಿರುದ್ಧವಾದುದಾಗಿದೆ. ಗೂಳಿಗಳನ್ನು ತಮ್ಮ ಕುಟುಂಬದ ಅವಿಭಾಜ್ಯ ಅಂಗವಾಗಿಯೇ ತಮಿಳುನಾಡು ಜನತೆ ಪರಿಗಣಿಸುತ್ತಿದ್ದಾರೆಯೇ ಅವುಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿಲ್ಲವೆಂದು ಎಡಿಎಂಕೆ ಸಂಸದರ ನಿಯೋಗವು ರಾಜ್‌ನಾಥ್‌ಸಿಂಗ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಹೇಳಿದ್ದಾರೆ.