ಕ್ರೈಸ್ತ ನ್ಯಾಯಮಂಡಳಿಯಿಂದ ಮಂಜೂರಾದ ವಿಚ್ಛೇದನ ಕಾನೂನುಬಾಹಿರ: ಸುಪ್ರೀಂ
ಹೊಸದಿಲ್ಲಿ,ಜ.20: ಕ್ರಿಶ್ಚಿಯನ್ ವೈಯಕ್ತಿಕ ಕಾನೂನಿನಡಿ ನ್ಯಾಯಾಧಿಕರಣವು ಮಂಜೂರು ಮಾಡುವ ವಿವಾಹ ವಿಚ್ಛೇದನವು ಕಾನೂನು ಬಾಹಿರವಾಗಿದೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯವು, ಇಂತಹ ವಿಚ್ಛೇದನಗಳಿಗೆ ಕಾನೂನಿನ ಮಾನ್ಯತೆಯನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿದೆ.
ಕರ್ನಾಟಕ ಕ್ಯಾಥೋಲಿಕ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಕ್ಲಾರೆನ್ಸ್ ಪಾಯಸ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ನ್ಯಾ.ಡಿ.ವೈ.ಚಂದ್ರಚೂಡ ಅವರನ್ನೊಳಗೊಂಡ ಪೀಠವು, 199ರಲ್ಲಿ ಮೊಲಿ ಜೋಸೆಫ್ ವಿರುದ್ಧ ಜಾರ್ಜ್ ಸೆಬಾಸ್ಟಿಯನ್ ಪ್ರಕರಣದಲ್ಲಿ ನೀಡಿರುವ ತನ್ನ ತೀರ್ಪಿನಲ್ಲಿ ಈ ವಿಷಯವನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಭಾರತದಲ್ಲಿ ವಿವಾಹ ವಿಚ್ಛೇದನ ಕಾಯ್ದೆ ಜಾರಿಗೆ ಬಂದ ನಂತರ ಕ್ಯಾನನ್ ಲಾ ಅಥವಾ ಕ್ರಿಶ್ಚಿಯನ್ ವೈಯಕ್ತಿಕ ಕಾನೂನಿನಡಿ ವಿಚ್ಛೇದನಗಳಿಗೆ ಕಾನೂನಿನ ಮಾನ್ಯತೆಯಿಲ್ಲ ಎಂದು ಅದು ಹೇಳಿದೆ.
‘ತ್ರಿವಳಿ ತಲಾಖ್ ’ಗೆ ಸಂಬಂಧಿಸಿದಂತೆ ಮುಸ್ಲಿಮರ ಪ್ರಕರಣದಲ್ಲಿ ಮಾಡಿರುವಂತೆ ಕ್ರಿಶ್ಚಿಯನ್ ವೈಯಕ್ತಿಕ ಕಾನೂನಿನಡಿಯ ವಿಚ್ಛೇದನಗಳನ್ನೂ ಸಿಂಧುವೆಂದು ಪರಿಗಣಿಸ ಬೇಕೆಂದು ಪಾಯಸ್ ತನ್ನ ಅರ್ಜಿಯಲ್ಲಿ ವಾದಿಸಿದ್ದರು.
ಕ್ರಿಶ್ಚಿಯನ್ ನ್ಯಾಯಾಧಿಕರಣಗಳಿಂದ ವಿಚ್ಛೇದನ ಪಡೆದುಕೊಂಡು ಮರುವಿವಾಹವಾದ ಹಲವಾರು ಕ್ಯಾಥೋಲಿಕ್ ಕ್ರೈಸ್ತರು ಇಂತಹ ವಿಚ್ಛೇದನಗಳಿಗೆ ಕಾನೂನಿನ ಮನ್ನಣೆಯಿಲ್ಲದೆ ದ್ವಿಪತ್ನಿತ್ವದ ಕ್ರಿಮಿನಲ್ ಆರೋಪವನ್ನು ಎದುರಿಸುವಂತಾಗಿದೆ ಎಂದೂ ಅವರು ಆರೋಪಿಸಿದ್ದರು.