×
Ad

ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸ್ಕೀಮ್ ನೌಕರರ ಮುಷ್ಕರ

Update: 2017-01-20 19:35 IST

ಉಡುಪಿ, ಜ.20: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಅಂಗನವಾಡಿ, ಬಿಸಿಯೂಟ, ಆಶಾ ಸೇರಿ ದಂತೆ ಸ್ಕೀಂ ನೌಕರರು ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಮುಷ್ಕರ ನಡೆಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಅಧ್ಯಕ್ಷ ವಿಶ್ವನಾಥ ರೈ, ಉದ್ಯೋಗ ಖಾತ್ರಿ ಇತ್ಯಾದಿ ಯೋಜನೆಗಳನ್ನು ಬಲಿಷ್ಠಪಡಿಸಬೇಕು. ಯೋಜನೆಗಳಿಗೆ ಕಡಿತವಾಗಿರುವ ಮೂರು ಕೋಟಿ ಅನುದಾನವನ್ನು ವಾಪಾಸು ನೀಡಬೇಕು. 45-46ನೆ ಎಲ್‌ಐಸಿ ಶಿಫಾರಸ್ಸಿನಂತೆ ನೌಕರರೆಂದು ಪರಿಗಣಿಸಿ ಕನಿಷ್ಠವೇತನ, ನಿವೃತ್ತಿ ಸೌಲಭ್ಯಗಳನ್ನು ಕೊಡಬೇಕು. ಈ ಎಲ್ಲ ಯೋಜನೆಗಳನ್ನು ಖಾಯಂ ಮಾಡಿ ಈ ಯೋಜನೆಗಳ ಫಲಾನುಭವಿಗಳನ್ನು ಉಳಿಸಬೇಕು ಎಂದು ತಿಳಿಸಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಸುಶೀಲ ನಾಡ ಮಾತನಾಡಿ, ಅಂಗನವಾಡಿ ನೌಕರರನ್ನು ಕನಿಷ್ಠ ಕೂಲಿ ಕಾಯಿದೆಯೊಳಗೆ ಸೇರಿಸಿ ಕನಿಷ್ಠಿ ಕೂಲಿ ಜಾರಿಗೊಳಿಸಬೇಕು. ಸೇವಾ ಜೇಷ್ಠತೆ ಆಧಾರದಲ್ಲಿ ಕನಿಷ್ಠ ಕೂಲಿ 18 ಸಾವಿರ ರೂ. ನೀಡಬೇಕು. ಅಂಗನವಾಡಿ ನೌಕರರನ್ನು ಸರಕಾರದ ಮೂರು ಮತ್ತು ನಾಲ್ಕನೆ ದರ್ಜೆ ನೌಕರರನ್ನಾಗಿ ಪರಿಗಣಿಸಿ ಖಾಯಂಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಮೇಲ್ವಿಚಾರಕಿ ಹುದ್ದೆಗೆ ಶೇ.100ರಷ್ಟು ಅಂಗನವಾಡಿ ನೌಕರರಿಗೆ ನೀಡಬೇಕು. ವಯಸ್ಸಿನ ಮಾನದಂಡ ಲಿಖಿತ ಪರೀಕ್ಷೆಗಳನ್ನು ನಡೆಸದೆ ಸೇವಾ ಜೇಷ್ಠತೆ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಬೇಕು. ನೌಕರರಿಗೆ ಪ್ರಮುಖ ಶಸ್ತ್ರ ಚಿಕಿತ್ಸೆಗಳಾಗುವಾಗ ಒಂದು ಲಕ್ಷ ರೂ. ಪರಿಹಾರ ವೇತನ ಸಹಿತ ರಜಾ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.

ಗ್ರಾಚ್ಯೂಟಿ, ಪಿಂಚಣಿ, ಭವಿಷ್ಯ ನಿಧಿ, ವೈದ್ಯಕೀಯ ಸೌಲಭ್ಯಗಳನ್ನು ನೀಡ ಬೇಕು. ಅಂಗನವಾಡಿ ಕೇಂದ್ರಗಳಿಗೂ ಎರಡು ತಿಂಗಳ ಬೇಸಿಗೆ ರಜಾ ಸೌಲಭ್ಯವನ್ನು ನೀಡಬೇಕು. ನೌಕರರಿಂದ ಇಲಾಖೇತರ ಕೆಲಸಗಳನ್ನು ಮಾಡಿಸಬಾರದು. ಬೀದರ್ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದರು.

ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿ ಅನುರಾಧ ಮನವಿಯನ್ನು ಸ್ವೀಕರಿಸಿದರು. ಧರಣಿಯಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಗೀತಾ ಶೆಟ್ಟಿ, ಕೋಶಾಧಿಕಾರಿ ಬಿ.ಆಶಾಲತಾ, ಜಯಲಕ್ಷ್ಮಿ, ಸರೋಜಿನಿ, ಶೈಲಾ, ಶಕುಂತಲಾ, ಸವಿತಾ, ಅರುಣ, ಸಿಐಟಿಯು ಮುಖಂಡರಾದ ಬಾಲಕೃಷ್ಣ ಶೆಟ್ಟಿ ,  ಕವಿರಾಜ್ ಉಪಸ್ಥಿತರಿದ್ದರು.

ಕುಂದಾಪುರದಲ್ಲಿ ಧರಣಿ:

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸ್ಕೀಂ ನೌಕರರು ಕುಂದಾಪುರ ತಾಪಂ ಎದುರು ಇಂದು ಮುಷ್ಕರ ನಡೆಸಿದರು.

ಧರಣಿಯನ್ನುದ್ದೇಶಿಸಿ ಸಿಐಟಿಯು ಮುಖಂಡರಾದ ಎಚ್.ನರಸಿಂಹ, ಸುರೇಶ್ ಕಲ್ಲಾಗರ, ಅಕ್ಷರ ದಾಸೋಹ ನೌಕರರ ಸಂಘದ ಜಯಶ್ರೀ, ಸಿಂಗಾರಿ, ಅಂಗನವಾಡಿ ಸಂಘದ ರತಿ ಶೆಟ್ಟಿ, ಆಶಾಲತ, ಸಬಿತ ಶೆಟ್ಟಿ, ಆಶಾ ಕಾರ್ಯಕರ್ತೆಯರ ಸಂಘದ ಶೀಲಾವತಿ ಮಾತನಾಡಿದರು.

ಬಳಿಕ ಮನವಿಯನ್ನು ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News