×
Ad

ಕಾಸರಗೋಡು : ಕೇರಳ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ರಾಜ್ಯ ಸಮ್ಮೇಳನ

Update: 2017-01-20 19:47 IST

ಕಾಸರಗೋಡು, ಜ.20 :  ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಹಕ್ಕುಗಳನ್ನು ಉಳಿಸಲು  ಹೋರಾಟ ಅನಿವಾರ್ಯ  ಎಂದು ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಹೇಳಿದರು.

ಅವರು ಶುಕ್ರವಾರ  ಕಾಸರಗೋಡು ನಗರ ಸಭಾಂಗಣದಲ್ಲಿ  ಆರಂಭಗೊಂಡ  ಕೇರಳ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ರಾಜ್ಯ ಸಮ್ಮೇಳನವನ್ನು  ಉದ್ಘಾಟಿಸಿ ಮಾತನಾಡುತ್ತಿದ್ದರು.

ಸರ್ಕಾರಿ ಆದೇಶ , ಸುತ್ತೋಲೆಗಳು ಮಲಯಾಳಂ ಜೊತೆಗೆ ಕನ್ನಡದಲ್ಲಿ  ಲಭಿಸಬೇಕಿದೆ.  ಹಲವು ಹೋರಾಟದ ಫಲವಾಗಿ ಕನ್ನಡಿಗರ ಬೇಡಿಕೆಗಳಿಗೆ  ಸ್ಪಂದನೆ ಲಭಿಸಬೇಕಿದೆ. ಆದರೆ ಈಗಲೂ ಸರಕಾರಿ  ಸುತ್ತೋಲೆಗಳು ಮಲಯಾಳಂ ನಲ್ಲಿ ಮಾತ್ರ ನೀಡಲಾಗುತ್ತಿದೆ. ಇದರಿಂದ ಕನ್ನಡಿಗರ  ಹಕ್ಕುಗಳ ಪಾಲನೆಗೆ ಹೋರಾಟ ಅಗತ್ಯ. ಇದರ ಜೊತೆಗೆ ಕಾಸರಗೋಡಿನಲ್ಲಿ  ಸರಕಾರಿ  ಮುದ್ರಣಾಲಯ  ಆರಂಭಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.

ಸಂಘದ ಅಧ್ಯಕ್ಷ ಟಿ .ಡಿ.ಸದಾಶಿವ ರಾವ್  ಅಧ್ಯಕ್ಷತೆ ವಹಿಸಿದ್ದರು.    ಜಿಲ್ಲಾ ಪಂಚಾಯತ್  ಸದಸ್ಯ ಕೆ .ಶ್ರೀಕಾಂತ್ , ಬೆಂಗಳೂರು ಸಿರಿಗನ್ನಡ ವೇದಿಕೆಯ  ರಾಜ್ಯ ಅಧ್ಯಕ್ಷ ಎಂ .ಎಸ್ ವೆಂಕಟರಾಮಯ್ಯ , ಕನ್ನಡ ಸಾಹಿತ್ಯ ಪರಿಷತ್  ಕೇರಳ ಗಡಿನಾಡ ಘಟಕ ಅಧ್ಯಕ್ಷ ಮುರಳೀಧರ ಬಳ್ಳುಕ್ಕರಾಯ ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್  ಕೆ . ಸ್ವಾಗತಿಸಿದರು , ಸಂಘದ ಕಾರ್ಯದರ್ಶಿ  ನವೀನ್ ಕುಮಾರ್  ರೈ ವಂದಿಸಿದರು . ಸದಸ್ಯೆ ಪದ್ಮಾವತಿ ಯಂ.  ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮೊದಲು,  ಕಾಸರಗೋಡು ಹೊಸಬಸ್ಸು ನಿಲ್ದಾಣದಿಂದ ಮೆರವಣಿಗೆ ನಡೆಯಿತು. ಬಳಿಕ ವಿವಿಧ ಸಂಘಟನೆಗಳೊಂದಿಗೆ ಸಂವಾದ , ಪ್ರತಿನಿಧಿ ಸಮಾವೇಶ ನಡೆಯಿತು.
ಜ.21 ಬೆಳಗ್ಗೆ 9.30 ಕ್ಕೆ ಕನ್ನಡ ಬೋಧನೆ ಮತ್ತು ವ್ಯವಹಾರ ಕುರಿತ ವಿಚಾರ ಸಂಕಿರಣ ನಡೆಯಲಿದ್ದು,  ಮೈಸೂರು  ಕರ್ನಾಟಕ ರಾಜ್ಯ ಮುಕ್ತ  ವಿಶ್ವ ವಿದ್ಯಾನಿಲಯ ಸಹಾಯಕ ಪ್ರಾಧ್ಯಾಪಕ  ಡಾ. ಯನ್.ಆರ್ ಚಂದ್ರೇಗೌಡ  ಅಧ್ಯಕ್ಷತೆ  ವಹಿಸುವರು .

ಅಪರಾಹ್ನ 2 ಗಂಟೆಗೆ ನಡೆಯಲಿರುವ  ಸಮಾರೋಪ ಸಮಾರಂಭವನ್ನು  ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್ ಉದ್ಘಾಟಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News