ನೌಕರಿ ಖಾಯಂಗೊಳಿಸಲು ಆಗ್ರಹಿಸಿ ಅಕ್ಷರ ದಾಸೋಹ ನೌಕರರ ಪ್ರತಿಭಟನೆ

Update: 2017-01-20 14:31 GMT

ಪುತ್ತೂರು , ಜ. 20 : ಅಕ್ಷರ ದಾಸೋಹ ಯೋಜನೆಯಲ್ಲಿ ಅಡುಗೆ ಕೆಲಸ ಮಾಡುತ್ತಿರುವ ನೌಕರರನ್ನು ಖಾಯಂಗೊಳಿಸಿ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯ ನೀಡಬೇಕು ಮತ್ತು ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ( ಸಿಐಟಿಯು) ದ ತಾಲೂಕು ಘಟಕದ ವತಿಯಿಂದ ಶುಕ್ರವಾರ ಪುತ್ತೂರು ಮಿನಿವಿಧಾನ ಸೌಧದ ಎದುರು ಪ್ರತಿಭಟನೆ ನಡೆಯಿತು.  

ಅಕ್ಷರ ದಾಸೋಹ ನೌಕರರ ವಿವಿಧಗಳನ್ನು ಬೇಡಿಕೆ ಮುಂದಿಟ್ಟುಕೊಂಡು ಶುಕ್ರವಾರ ನಡೆದ ರಾಷ್ಟ್ರವ್ಯಾಪಿ ಮುಷ್ಕರದ ಭಾಗವಾಗಿ ಪುತ್ತೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪುತ್ತೂರು ತಾಲೂಕಿನ ನೂರಾರು ಅಕ್ಷರದಾಸೋಹ ಕಾರ್ಯಕರ್ತರು ಪಾಲ್ಗೊಂಡರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐಎಂ ಪುತ್ತೂರು ತಾಲೂಕು ಕಾರ್ಯದರ್ಶಿ ಪಿ.ಕೆ. ಸತೀಶನ್ ,  ಬಿಸಿಯೂಟ ಯೋಜನೆಯಲ್ಲಿ ಕೆಲಸ ಮಾಡುವವರನ್ನು ನೌಕರರು ಎಂದು ಪರಿಗಣಿಸಿ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯ ಇತ್ಯಾದಿಗಳನ್ನು ನೀಡಬೇಕೆಂದು 2013ರಲ್ಲಿ ನಡೆದ ಭಾರತ ಕಾರ್ಮಿಕ ಸಮ್ಮೇಳನದಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ ಇಂದಿನ ಕೇಂದ್ರ ಸರ್ಕಾರ ಈ ಶಿಫಾರಸುಗಳನ್ನು ಜಾರಿ ಮಾಡುವ ಬದಲು ಯೋಜನೆಯನ್ನೇ ದುರ್ಬಲಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ದೇಶವ್ಯಾಪಿ ಜಾರಿಗೊಂಡ ಬಿಸಿಯೂಟ ಯೋಜನೆಗೆ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಾ ಬಂದಿದೆ. ಆದರೆ ಈಗಿನ ಕೇಂದ್ರ ಸರ್ಕಾರ 2015-16ರ ಬಜೆಟ್‌ನಲ್ಲಿ ರೂ. 3 ಲಕ್ಷ ಕೋಟಿ ಅನುದಾನ ಕಡಿತಗೊಳಿಸಿದೆ. ಇದರಿಂದ ಸರ್ವ ಶಿಕ್ಷ ಅಭಿಯಾನ ಸಮರ್ಪಕವಾಗಿ ಜಾರಿಗೊಳ್ಳದೆ ಬಳಲುತ್ತಿದೆ. ಲಕ್ಷಾಂತರ ಬಿಸಿಯೂಟ ನೌಕರರಿಗೆ ತೊಂದರೆಯಾಗಿದೆ ಎಂದು ದೂರಿದ ಅವರು,  ಕಳೆದ 14 ವರ್ಷಗಳಿಂದ ಬಿಸಿಯೂಟ ನೌಕರರು ದುಡಿಯುತ್ತಿದ್ದರೂ ಸಮಾನ ಕೆಲಸಕ್ಕೆ ಸಮಾನ ವೇತನ ಇಲ್ಲದಂತಾಗಿದೆ ಎಂದರು.

 ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ತಾಲ್ಲೂಕು ಘಟಕದ ಗೌರವಾಧ್ಯಕ್ಷೆ ಯಶೋಧಾ ಅವರು ಮಾತನಾಡಿ, ಹಿಂದಿನ ಸರ್ಕಾರ ಒಪ್ಪಿಕೊಂಡಿದ್ದ ರೂ.1 ಸಾವಿರ ಏರಿಕೆ ವೇತನವನ್ನು ನೀಡಬೇಕು. ಬಿಸಿಯೂಟ ನೌಕರರನ್ನು ಖಾಯಂಗೊಳಿಸಬೇಕು. ಅಕ್ಷರ ದಾಸೋಹ ಯೋಜನೆಗೆ ಕಡಿತಗೊಳಿಸಿರುವ ರೂ. 3 ಲಕ್ಷ ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.

ತಾಲೂಕು ಸಂಘದ ಅಧ್ಯಕ್ಷೆ ಶ್ರೀಮತಿ ಪರ್ಪುಂಜ, ಕಾರ್ಯದರ್ಶಿ ಮೋಹಿನಿ ಹಿರೇಬಂಡಾಡಿ, ಖಜಾಂಚಿ ವೇದಾವತಿ ಕೊಳ್ತಿಗೆ ಮತ್ತಿತರರು ಉಪಸ್ಥಿತರಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News