×
Ad

ಅರಣ್ಯ ಸಂಪತ್ತು ವಿಚಾರದಲ್ಲಿ ರಾಜಿ ಇಲ್ಲ: ಸಚಿವ ರಮಾನಾಥ ರೈ

Update: 2017-01-20 20:25 IST

ಬಂಟ್ವಾಳ, ಜ. 20: ಅರಣ್ಯ ಸಂಪತ್ತು ಉಳಿಸಿ ಬೆಳೆಸುವ ವಿಚಾರದಲ್ಲಿ ಯಾವುದೇ ರಾಜಿ ಮಾಡುವುದಿಲ್ಲ ಎಂದು ರಾಜ್ಯ ಅರಣ್ಯ ಸಚಿವರೂ ಆದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಅರಣ್ಯ ಇಲಾಖೆ ಮಂಗಳೂರು ವೃತ್ತದಿಂದ ಬಂಟ್ವಾಳ ತಾಲೂಕಿನ ವೀರಕಂಭದ ಸಂರಕ್ಷಿತ ಅರಣ್ಯದಲ್ಲಿ ನಿರ್ಮಿಸಿರುವ ’ಸಿರಿ ಚಂದನ ವನ’ವನ್ನು ಶುಕ್ರವಾರ  ಉದ್ಘಾಟಿಸಿದ ಬಳಿಕ ಕೆಲಿಂಜ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಅರಣ್ಯದ ಒಳಗೆ ಯಾವುದೇ ಅರಣ್ಯೇತರ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ. ಪಶ್ಚಿಮ ಘಟ್ಟದ ಕಾಡುಗಳನ್ನು ಉಳಿಸುವ ನಿಟ್ಟಿನಲ್ಲಿ ಕಸ್ತೂರಿ ರಂಗನ್ ವರದಿ ಸಿದ್ಧಪಡಿಸಲಾಗಿದೆ. ಆದರೆ ಕೆಲವರು ಅದಕ್ಕೆ ವಿರೋಧ ವ್ಯಕ್ತಪಡಿಸಿರುವುದರಿಂದ ವರದಿಯನ್ನು ಸಂರಕ್ಷಿತ ಅರಣ್ಯಕ್ಕೆ ಸೀಮಿತವಾಗಿಯಷ್ಟೇ ಅನುಷ್ಠಾನಗೊಳ್ಳುವಂತೆ ಶಿಫಾರಸು ಮಾಡಿದ್ದೇವೆ ಎಂದ ಅವರು, ಕಸ್ತೂರಿರಂಗನ್ ವರದಿ ಕುರಿತು ಪ್ರತೀಯೊಬ್ಬರು ನಿಜಾಂಶ ತಿಳಿಯಬೇಕು ಎಂದರು.

ಮಂಗಳೂರಿನ ಪಡೀಲ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿ ನಿರ್ಮಿಸುವಾಗ ಕೆಲವೊಂದು ಮರಗಳು ಕಡಿಬೇಕಾಗಿದೆ. ಅದಕ್ಕೆ ಕೆಲವರು ಅರಣ್ಯ ನಾಶವಾಗುತ್ತಿದೆ ಎಂದು ವಿರೋಧ ವ್ಯಕ್ತಪಡಿಸುತ್ತಾರೆ. ಪಶ್ವಿಮ ಘಟ್ಟದ ಕಾಡನ್ನು ಉಳಿಸಲು ಕಸ್ತೂರಿ ರಂಗನ್ ವರದಿ ಸಿದ್ಧಪಡಿಸಿದರೆ ಅದಕ್ಕೂ ವಿರೋಧ ವ್ಯಕ್ತವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಎಲ್ಲಿ ಪರಿಸರವನ್ನು ಉಳಿಸಬೇಕೊ ಅಲ್ಲಿ ಪರಿಸರವನ್ನು ಉಳಿಸದೆ ಅಭಿವೃದ್ಧಿಗಾಗಿ ಕೆಲವು ಮರಗಳನ್ನು ಕಡಿದಾಗ ಅಲ್ಲಿ ಪರಿಸರ ಉಳಿಸುವ ಕೂಗು ಕೇಳಿ ಬರುತ್ತಿದೆ ಎಂದರು.

ವೀರಕಂಬದ 580 ಎಕ್ರೆ ಸಂರಕ್ಷಿತ ಅರಣ್ಯದಲ್ಲಿ ಸ್ವಾಭಾವಿಕವಾಗಿ ಬೆಳೆದಿರುವ ಹಾಗೂ ನೆಡಲಾದ ಸಾವಿರಾರು ಶ್ರೀಗಂಧದ ಸಸಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ’ಸಿರಿ ಚಂದದ ವನ’ ನಿರ್ಮಿಸಲಾಗಿದೆ. ಅರಣ್ಯದ ಸುತ್ತಕ್ಕೂ ಬೇಲಿ ಅಳವಡಿಸಲಾಗಿದ್ದು ದಿನದ 24 ಗಂಟೆಯೂ ಕಾವಳುಗಾರರನ್ನು ನೇಮಿಸಿ ಶ್ರೀಗಂಧದ ಸಸಿಗಳನ್ನು ಬೆಳೆಸುವ ಮೂಲಕ ಅರಣ್ಯವನ್ನು ಸಂರಕ್ಷಿಸಲಾಗುವುದು ಎಂದ ಅವರು, ಕೆಲವೇ ವರ್ಷದಲ್ಲಿ ಇದರ ಉತ್ತಮ ಫಲಿತಾಂಶದ ನಿರೀಕ್ಷೆ ಮಾಡುತ್ತಿದ್ದೇವೆ ಎಂದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಟ್ರೀ ಪಾರ್ಕ್:

ಈಗಾಗಲೇ ಮಂಗಳೂರಿನ ತಣ್ಣೀರುಬಾವಿ, ಪುತ್ತೂರಿನ ಬಿರುಮಲೆ ಬೆಟ್ಟ, ಉಡುಪಿಯ ಬಡಗಬೆಟ್ಟುವಿನಲ್ಲಿ ಸುಂದರವಾದ ಟ್ರೀ ಪಾರ್ಕ್ ನಿರ್ಮಿಸಲಾಗಿದೆ. ಬಂಟ್ವಾಳ ಐಬಿ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದ್ದು ಕಾಮಗಾರಿ ಮುಗಿದ ಬಳಿಕ ಐಬಿ ಎದುರು ಸುಂದರವಾದ ಟ್ರೀ ಪಾರ್ಕ್ ನಿರ್ಮಾಣ ಮಾಡಲಾಗುವುದು. ಟ್ರೀ ಪಾರ್ಕ್‌ನಿಂದ ಶುದ್ಧ ಗಾಳಿ, ಸ್ವಚ್ಛ ಪರಿಸರ ನಿರ್ಮಾಣವಾಗುವುದರಿಂದ ರಾಜ್ಯದ ಪ್ರತೀ ವಿಧಾನಸಭಾ ಕ್ಷೇತ್ರದಲ್ಲೊಂದು ಟ್ರೀ ಪಾರ್ಕ್ ನಿರ್ಮಿಸಲಾಗುವುದು ಎಂದು ಸಚಿವ ರಮಾನಾಥ ರೈ ಹೇಳಿದರು.

ಕಾರಿಂಜದಲ್ಲಿ ಔಷಧೀಯ ಗಿಡಗಳನ್ನು ನೆಟ್ಟು ದೈವೀವನ ನಿರ್ಮಿಸಲಾಗಿದೆ. ಪುತ್ತೂರಿನಲ್ಲಿ ದೇಯಿ ಬೈದೇತಿ ಔಷಧಿವನ ನಿರ್ಮಿಸಲಾಗಿದೆ. ಮಕ್ಕಳು ಪರಿಸರ ರಕ್ಷಣೆಯ ಕುರಿತು ಅರಿತುಕೊಳ್ಳುವುದು ಅತೀ ಅಗತ್ಯವಾಗಿರುವುದರಿಂದ ಚಿಣ್ಣರ ವನ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಸದಸ್ಯ ಜಗದೀಶ ಕೊಯ್ಲ, ಜಿಪಂ ಸದಸ್ಯರಾದ ಮಂಜುಳಾ ಮಾಧವ ಮಾವೆ, ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಸದಸ್ಯರಾದ ಗೀತಾ ಚಂದ್ರಶೇಖರ್, ಶೋಭಾ ರೈ, ಎಪಿಎಂಸಿ ಗೆ ಆಯ್ಕೆಯಾದ ಪದ್ಮರಾಜ ಬಲ್ಲಾಳ್, ಪದ್ಮನಾಭ ರೈ, ಚಂದ್ರಶೇಖರ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ಹಮೀದ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂಜಯ್ ಎಸ್. ಬಿಜ್ಜೂರು, ಬುಡಾ ನಿಕಟಪೂರ್ವ ಅಧ್ಯಕ್ಷ ಪಿಯುಸ್ ಎಲ್. ರೋಡ್ರಿಗಸ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಟಿ.ಹನುಮಂತಪ್ಪ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ದಿಲೀಪ್ ಕುಮಾರ್, ಗ್ರಾಮ ಅರಣ್ಯ ರಕ್ಷಣಾ ಸಮಿತಿ ಮಾಜಿ ಅಧ್ಯಕ್ಷ ವಿಶ್ವನಾಥ ಎಂ, ಗ್ರಾಪಂ ಅಧ್ಯಕ್ಷೆ ಪ್ರೇಮಲತಾ, ಅರಣ್ಯ ಅಪರ ಸಂರಕ್ಷಣಾಧಿಕಾರಿ ವಿಜಯ ನರಸಿಂಹರಾಜ್ ಮೊದಲಾದವರು ಉಪಸ್ಥಿತರಿದ್ದರು.

ಡಾ. ಕೆ.ಟಿ.ಹನುಮಂತಪ್ಪ ಸ್ವಾಗತಿಸಿದರು. ಡಾ. ಸಂಜಯ ಎಸ್.ಬಿಜ್ಜೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ವಲಯ ಅರಣ್ಯಾಧಿಕಾರಿ ಬಿ.ಸುರೇಶ್ ವಂದಿಸಿದರು.

ಇದಕ್ಕೂ ಮುನ್ನ ಸ್ಥಳೀಯ ಶಾಲಾ ಮಕ್ಕಳು ಪರಿಸರ ಸಂರಕ್ಷಣೆ ಕುರಿತು ನಾಟಕ ಪ್ರದರ್ಶಿಸಿದರು.

ಗೋಪುರ ಏರಿ ಅರಣ್ಯ ವೀಕ್ಷಿಸಿದ ಸಚಿವ
ಬಂಟ್ವಾಳದ ವೀರಕಂಭದ ಸಂರಕ್ಷಿತ ಅರಣ್ಯದಲ್ಲಿ ನಿರ್ಮಿಸಿರುವ ’ಸಿರಿ ಚಂದನ ವನ’ವನ್ನು ನಾಮ ಫಲಕ ಅನಾವರಣ ಹಾಗೂ ರಿಬ್ಬನ್ ತುಂಡರಿಸುವ ಮೂಲಕ ಉದ್ಘಾಟಿಸಿದ ಬಳಿಕ ವನದಲ್ಲಿ ಶ್ರೀಗಂಧದ ಸಸಿಗಳನ್ನು ನೆಟ್ಟು ನೀರು ಹಾಯಿಸಿದರು. ಬಳಿಕ ಅರಣ್ಯ ಇಲಾಖೆಯ ವಾಹನದಲ್ಲಿ ಅರಣ್ಯದ ತುತ್ತ ತುದಿಗೆ ತೆರಳಿದ ಸಚಿವರು ಬಂಡೆ ಕಲ್ಲಿನ ಮೇಲೆ ನಿರ್ಮಿಸಿರುವ ’ಅರಣ್ಯ ವೀಕ್ಷಣ ಗೋಪುರ’ವನ್ನು ಏರಿ ಅರಣ್ಯವನ್ನು ಒಂದು ಸುತ್ತು ವೀಕ್ಷಿಸಿದರು.
ಗೋಪುರದ ಮೇಲಿನಿಂದಲೇ ಕೆಳಗಿದ್ದ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಈ ಗೋಪುರವನ್ನು ಏರಿದರೆ ಅರಣ್ಯದ ಬಹುತೇಕ ಪ್ರದೇಶಗಳು ಕಾಣಲಿದೆ. ಗೋಪುರದಲ್ಲಿ ನಿಂತಾಗ ದೂರದಲ್ಲಿ ಎಲ್ಲಿಯಾದರೂ ಅರಣ್ಯಕ್ಕೆ ಬೆಂಕಿ ಬಿದ್ದರೆ ಗೋಚರವಾಗಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News