ಬ್ರಹ್ಮಾವರ ತಾಲೂಕು ಹೋರಾಟ ಸಮಿತಿಯಿಂದ ಶಾಸಕರ ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ
ಉಡುಪಿ, ಜ.20: ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಬ್ರಹ್ಮಾವರ ತಾಲೂಕು ರಚನೆಯ ಕುರಿತಂತೆ ಹೋರಾಟ ನಡೆಸುತ್ತಿರುವ ಬ್ರಹ್ಮಾವರ ತಾಲೂಕು ರಚನಾ ಹೋರಾಟ ಸಮಿತಿ ಎರಡು ದಿನಗಳ ಕಾಲ ಉಡುಪಿ ತಾಲೂಕಿನ ಎಲ್ಲಾ ಶಾಸಕರ ಕಚೇರಿ ಎದುರು ವಿನೂತನ ರೀತಿಯ ಪ್ರತಿಭಟನೆ ನಡೆಸಲಿದೆ ಎಂದು ಸಮಿತಿಯ ಅಧ್ಯಕ್ಷ ಬಾರಕೂರು ಸತೀಶ್ ಪೂಜಾರಿ ತಿಳಿಸಿದ್ದಾರೆ.
ಭಜನೆ ಹಾಡುಗಳನ್ನು ಕುಣಿತದ ಮೂಲಕ ಹಾಡುತ್ತಾ ತಾಲೂಕು ರಚನೆಯ ಕುರಿತಂತೆ ಶಾಸಕರನ್ನು ಒತ್ತಾಯಿಸುವ ಈ ವಿನೂತನ ಪ್ರತಿಭಟನೆ, ತಾಲೂಕಿನ ಐವರು ಶಾಸಕರ ಕಚೇರಿಗಳ ಎದುರು 21 ಹಾಗೂ 22ರಂದು ನಡೆಯಲಿದೆ ಎಂದವರು ನುಡಿದರು.
♦ ಜ.21ರಂದು ಬೆಳಗ್ಗೆ 9:30ಕ್ಕೆ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಕಚೇರಿ ಎದುರು, 10:30ಕ್ಕೆ ಕಾಪು ಶಾಸಕ ವಿನಯಕುಮಾರ್ ಸೊರಕೆ ಕಚೇರಿ ಎದುರು (ಎರಡೂ ಉಡುಪಿ ತಾಪಂ ಕಟ್ಟಡದಲ್ಲಿ).
♦ ಜ.22ರಂದು ಬೆಳಗ್ಗೆ 9:00ಕ್ಕೆ ಕೋಟ ಶ್ರೀನಿವಾಸ ಪೂಜಾರಿ ಕಚೇರಿ ಎದುರು ಕೋಟ, 10:00ಕ್ಕೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಕಚೇರಿ ಎದುರು ಹಾಲಾಡಿ, 10:30ಕ್ಕೆ ಪ್ರತಾಪ್‌ಚಂದ್ರ ಶೆಟ್ಟಿ ಅವರ ಕಚೇರಿ ಎದುರು ಹೈಕಾಡಿ.
ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ 2013ರ ಫೆ.8ರಂದು ಮಂಡಿಸಿದ ಬಜೆಟ್‌ನಲ್ಲಿ ಬ್ರಹ್ಮಾವರವೂ ಸೇರಿದಂತೆ 43 ಹೊಸ ತಾಲೂಕುಗಳ ರಚನೆಯ ಷೋಷಣೆ ಮಾಡಿದ್ದರು. ಆದರೆ ಅನಂತರದ ಸಿದ್ಧರಾಮಯ್ಯ ಸರಕಾರ ಆಡಳಿತಕ್ಕೆ ಬಂದು ನಾಲ್ಕು ವರ್ಷಗಳಾಗುತ್ತಾ ಬಂದರೂ ಅವುಗಳನ್ನು ಜಾರಿಗೊಳಿಸದೇ ಗೊಂದಲಕ್ಕೆ ಎಡೆ ಮಾಡಿದ್ದಾರೆ ಎಂದವರು ದೂರಿದರು.
ತಾಲೂಕು ರಚನೆಗೆ ಬೇಡಿಕೆ ದಿನೇ ದಿನೇ ಹೆಚ್ಚಾಗುತಿದ್ದು, ಈಗಾಗಲೇ ಘೋಷಣೆಯಾದ ತಾಲೂಕುಗಳನ್ನು ಮೊದಲ ಆದ್ಯತೆಯಾಗಿ ತೆಗೆದುಕೊಂಡು ಸರಕಾರ ನ್ಯಾಯ ಒದಗಿಸಿಕೊಡಬೇಕು. ಇದಕ್ಕಾಗಿ ಸ್ಥಳೀಯ ಶಾಸಕರ ಮೂಲಕ ಒತ್ತಾಯಿಸಲಾಗುತ್ತಿದೆ. ಬ್ರಹ್ಮಾವರಕ್ಕೆ ತಾಲೂಕು ಸ್ಥಾನಮಾನ ಪಡೆಯುವ ಎಲ್ಲಾ ಅರ್ಹತೆಗಳಿದ್ದು, ಯಾವುದೇ ಕಾರಣಕ್ಕೂ ಇದಕ್ಕೆ ಅನ್ಯಾಯ ಎಸಗಬಾರದು ಎಂದು ಸಮಿತಿಯ ಅಧ್ಯಕ್ಷ ಸತೀಶ್ ಪೂಜಾರಿ, ಸಂಚಾಲಕರಾದ ನಿರಂಜನ್ ಹೆಗ್ಡೆ ಅಲ್ತಾರು, ಕಾರ್ಯದರ್ಶಿ ಸಂತೋಷ್ ಪೂಜಾರಿ, ಆನಂದ ಮಟಪಾಡಿ, ಕೋಟಿ ಪೂಜಾರಿ ವಡ್ಡರ್ಸೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.