ಗ್ವಾಂಟನಾಮೊ ಜೈಲಿನಿಂದ ಇನ್ನೂ ನಾಲ್ವರು ಕೈದಿಗಳ ಸ್ಥಳಾಂತರ
Update: 2017-01-20 21:09 IST
ವಾಶಿಂಗ್ಟನ್, ಜ. 20: ಕ್ಯೂಬದ ಗ್ವಾಂಟನಾಮೊ ಕೊಲ್ಲಿಯಲ್ಲಿರುವ ಅಮೆರಿಕದ ಸೇನಾ ಜೈಲಿನಿಂದ ಇನ್ನೂ ನಾಲ್ವರು ಕೈದಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಗುರುವಾರ ತಿಳಿಸಿದೆ.
ಅಧ್ಯಕ್ಷ ಬರಾಕ್ ಒಬಾಮರ ಆಡಳಿತದಲ್ಲಿ ನಡೆಯುತ್ತಿರುವ ಕೊನೆಯ ಹಸ್ತಾಂತರ ಇದಾಗಿದೆ. ಇದರೊಂದಿಗೆ ಕುಖ್ಯಾತ ಜೈಲಿನಲ್ಲಿರುವ ಕೈದಿಗಳ ಸಂಖ್ಯೆ 41ಕ್ಕೆ ಇಳಿದಿದೆ.ಓರ್ವ ಕೈದಿಯನ್ನು ಸೌದಿ ಅರೇಬಿಯ ಮತ್ತು ಇತರ ಮೂವರನ್ನು ಯುನೈಟಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಕೊಂಡೊಯ್ಯಲಾಗುತ್ತಿದೆ.
2009 ಜನವರಿಯಲ್ಲಿ ಒಬಾಮ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗ ಗ್ವಾಂಟನಾಮೊ ಜೈಲಿನಲ್ಲಿ 242 ಕೈದಿಗಳಿದ್ದರು.
ಅಧಿಕಾರ ಸ್ವೀಕರಿಸಿದ ಒಂದು ವರ್ಷದಲ್ಲಿ ಗ್ವಾಂಟನಾಮೊ ಜೈಲನ್ನು ಮುಚ್ಚುವುದಾಗಿ ಅವರು ಭರವಸೆ ನೀಡಿದ್ದರು. ಆದರೆ, ಈ ಗುರಿಯನ್ನು ಸಾಧಿಸಲು ಆಗಿಲ್ಲ ಎಂಬುದನ್ನು ಇತ್ತೀಚೆಗೆ ಸರಕಾರದ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.