ಮಂಗಳೂರು : ಔಷಧಿಗಾಗಿ ಆಸ್ಪತ್ರೆಯ ಮುಂಭಾಗ ಧರಣಿ ಕುಳಿತ ರೋಗಿ !
ಮಂಗಳೂರು, ಜ.20: ನಗರದ ಶಿವಭಾಗ್ ಕದ್ರಿ ಬಳಿ ಇರುವ ಇಎಸ್‌ಐ ಆಸ್ಪತ್ರೆಯ ಎದುರು ತನಗೆ ಇಎಸ್‌ಐ ಆಸ್ಪತ್ರೆಯಿಂದ ಔಷಧಿ ದೊರೆಯದ ಹಿನ್ನಲೆಯಲ್ಲಿ ರೋಗಿಯೊಬ್ಬರು ಧರಣಿ ನಡೆಸಿದ ಘಟನೆ ಇಂದು ನಡೆಯಿತು.
ಮೂಡುಬಿದಿರೆಯ ಯುವರಾಜ್ ಬಲ್ಲಾಳ್ 2014ರಲ್ಲಿ ವಿಪರೀತ ಕೆಮ್ಮು ,ಜ್ವರ ಪೀಡಿತರಾಗಿ ನಗರದ ಖಾಸಗಿ ಆಸ್ಪತ್ರೆಯ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಾರೆ. ಬಳಿಕ ಅವರ ಸೂಚನೆಯ ಪ್ರಕಾರ ಇನ್ನೊಂದು ಖಾಸಗಿ ವೈದ್ಯರ ಬಳಿ ತೆರಳಿ( ಎಂಆರ್‌ಐ) ಸ್ಕಾನ್ ಮಾಡಿದಾಗ ಶಾಸ್ವ ಕೋಶದ ಕ್ಯಾನ್ಸರ್ ರೋಗದ ಸೋಂಕು ಇರುವುದು ಪತ್ತೆಯಾಗಿದೆ.ವೈದ್ಯರ ಸಲಹೆಯಂತೆ ಚಿಕಿತ್ಸೆಗೆ ಔಷಧಿ ಸೇವಿಸಲು ತನಗೆ ಸೂಚಿಸಿರುವುದಾಗಿ ಯುವರಾಜ್ ಬಲ್ಲಾಳ್ ತಿಳಿಸಿದ್ದಾರೆ.‘‘ಅಕ್ಟೋಬರ್ 5, 2016ರಲ್ಲಿ ಕುಲಶೇಖರದಲ್ಲಿರುವ ಇಎಸ್‌ಐ ಡಿಸ್ಪೆನ್ಸರಿಗೆ ತೆರಳಿದಾಗ ಈಗ ಔಷಧಿ ಸ್ಟಾಕಿಲ್ಲ ಒಂದು ತಿಂಗಳ ಬಳಿಕ ಬರುತ್ತದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಒಂದು ತಿಂಗಳು ಕಳೆದ ಬಳಿಕ ಅಲ್ಲಿ ಕೇಳಿದಾಗಲೂ ಔಷಧಿ ದೊರೆಯಲಿಲ್ಲ.ನನಗೆ ಔಷಧಿ ತೆಗೆದು ಕೊಳ್ಳುವುದು ಅನಿವಾರ್ಯವಾಗಿತ್ತು .ಹೊರಗಿನಿಂದ ಹಣ ತೆತ್ತು ಔಷಧಿ ತೆಗೆದುಕೊಳ್ಳ ತೊಡಗಿದೆ.ಅದಕ್ಕೆ ಬೇಕಾದಷ್ಟು ಹಣ ಇರಲಿಲ್ಲ. ಸಾಲ ಮಾಡಬೇಕಾಯಿತು.ಮನೆಯಲ್ಲಿ 6ಜನ ಸದಸ್ಯರಿದ್ದಾರೆ. ಮಗ ಒಬ್ಬ ಹೊರಗೆ ಖಾಸಗಿ ಸಂಸ್ಥೆಯಲ್ಲಿ ದುಡಿಯುವುದು ಬಿಟ್ಟರೆ ಬೇರೆ ಆದಾಯ ಇಲ್ಲ. ಇಎಸ್‌ಐ ಆಸ್ಪತ್ರೆಯಲ್ಲಿ ಔಷಧ ದೊರೆಯದಿದ್ದರೆ ಇನ್ನು ಮುಂದೆ ಹಣ ತೆತ್ತು ಖರೀದಿಸಲು ನನ್ನಿಂದ ಸಾಧ್ಯವಿಲ್ಲ. ಕಳೆದ ಒಂದೂವರೆ ತಿಂಗಳಿನಿಂದಲೂ ಕಾಯುತ್ತಿದ್ದೇನೆ. ದೊರೆಯದೆ ಇದ್ದಾಗ ಇಲ್ಲಿ ಧರಣಿ ಕೂರಬೇಕಾಯಿತು ’’ ಎಂದು ಯುವರಾಜ್ ಬಲ್ಲಾಳ್ ತಮ್ಮ ಅಳಲನ್ನು ತೋಡಿಕೊಂಡರು.
ಇದೇ ಸಂದರ್ಭದಲ್ಲಿ ಕಾರ್ಮಿಕ ಮುಂಖಡರಾದ ಸುದತ್ತ ಜೈನ್,ಹರೀಶ್ ಶೆಟ್ಟಿ ,ಇ.ಕೆ.ಹುಸೈನ್ ಯುವರಾಜ್ ಬಲ್ಲಾಳ್‌ರ ಧರಣಿಗೆ ಬೆಂಬಲ ನೀಡಿದರು.
ಇಎಸ್ ಐ ಅಧಿಕಾರಿಗಳಿಂದ ಭರವಸೆ:
ಇದೇ ಸಂದರ್ಭದಲ್ಲಿ ಇಎಸ್‌ಐ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅಶೋಕ್ ಕುಮಾರ್ ನಾಯ್ಕೆ ಮೇಲಾಧಿಕಾರಿಗಳ ಗಮನಕ್ಕೆ ತಂದ ಬಳಿಕ ಮುಂದಿನ ಮೂರು ದಿನದ ಒಳಗಾಗಿ ಔಷಧ ತರಿಸಿಕೊಡುವುದಾಗಿ ಭರವಸೆ ನೀಡಿದ ಕಾರಣ ಯುವರಾಜ್ ತಮ್ಮ ಧರಣಿಯನ್ನು ಹಿಂತೆಗೆದುಕೊಂಡರು.
ಈ ಸಂದರ್ಭದಲ್ಲಿ ಧರಣಿಯಲ್ಲಿ ಪಾಲ್ಗೊಂಡ ಕಾರ್ಮಿಕ ಸಂಘಟನೆಯ ಸದಸ್ಯರು ಹಾಗೂ ಆಸ್ಪತ್ರೆಯ ಅಧಿಕಾರಿಗಳು ಆಸ್ಪತ್ರೆಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರೀಯೆ ನೀಡಿದರು.
ಇಎಸ್‌ಐ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ . ಹಲವು ಔಷಧಿಗಳು ತುರ್ತಾಗಿ ಬೇಕಾಗಿದ್ದರೂ ಸ್ಟಾಕ್ ಇಲ್ಲ ಎನ್ನುತ್ತಿದ್ದಾರೆ. 1979ರಲ್ಲಿ ಬಡವರಿಗಾಗಿ ರಚನೆಯಾದ ಈ ಆಸ್ಪತ್ರೆಯ ಸಮಸ್ಯೆಯ ಬಗ್ಗೆ ಸಂಸದರಿಗೆ,ಸಚಿವರಿಗೆ ಶಾಸಕರಿಗೆ ದೂರು ನೀಡಿದ್ದರೂ , ಕುಂದು ಕೊರತೆ ಸಮಸ್ಯೆ ಸಮಿತಿ ರಚನೆಯಾಗಿದ್ದರೂ , ವೈದ್ಯರ ಕೊರತೆ,ತುರ್ತಾಗಿ ರೋಗಿಗಳಿಗೆ ಹಣ ಮರುಪಾವತಿಯಾಗದಿರುವ ಸಮಸ್ಯೆ ಹಾಗೆ ಉಳಿದಿದೆ
- ಕಾರ್ಮಿಕ ಸಂಘಟನೆಯ ಮುಖಂಡ ಸುದತ್ತ ಜೈನ್
ಬಡವರ ಇಎಸ್‌ಐ ಆಸ್ಪತ್ರೆಯಲ್ಲಿ 22 ವೈದ್ಯರ ಕೊರತೆ ಇದೆ.ಆ ಕಾರಣದಿಂದ ಬಡವರು ಇಲ್ಲಿ ಚಿಕಿತ್ಸೆ ಪಡೆಯಲು ಬರಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹೊಸದಾಗಿ ವೈದ್ಯರ ನೇಮಕಾತಿ ಆದರೂ ಅವರು ಕೆಲವೇ ದಿನಗಳಲ್ಲಿ ಇಲ್ಲಿಂದ ವರ್ಗವಾಗಿ ಬೇರೆ ಕಡೆ ಹೋಗುತ್ತಾರೆ. ಖಾಸಗಿ ಆಸ್ಪತ್ರೆಯ ವೈದ್ಯರು ಇಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆಗೆ ಬಂದರೂ ಅವರ ಸೇವೆ ಪೂರ್ಣ ಪ್ರಮಾಣದಲ್ಲಿ ದೊರೆಯದಿರುವುದರಿಂದ ಸಮಸ್ಯೆಯಾಗಿದೆ
-ಮಾನವ ಹಕ್ಕು ಹಾಗೂ ಕಾರ್ಮಿಕ ಸಂಘಟನೆಯ ಮುಖಂಡ ಇ.ಕೆ.ಹುಸೈನ್
ಕಾರ್ಮಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕಾದ ಈ ಆಸ್ಪತ್ರೆಯಲ್ಲಿ ಆ ರೀತಿಯ ಸ್ಪಂದನ ಇಲ್ಲ.ಆ ಕಾರಣದಿಂದ ರೋಗಿಗಳಿಗೆ ಒಂದೂವರೆ ತಿಂಗಳಾದರೂ ಔಷಧಿ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ
- ಕಾರ್ಮಿಕ ಸಂಘಟನೆಯ ಮುಖಂಡರಾದ ಹರೀಶ್ ಶೆಟ್ಟಿ ಬಂಟ್ವಾಳ
ಇಎಸ್‌ಐ ಆಸ್ಪತ್ರೆಯಲ್ಲಿ ಮಂಜೂರಾದ 28 ವೈದ್ಯರ ಹುದ್ದೆಗಳಲ್ಲಿ 6 ಮಂದಿ ವೈದ್ಯರು ಮಾತ್ರ ಈಗ ಕಾರ್ಯನಿರ್ವಹಿಸುತ್ತಿದ್ದೇವೆ.ಉಳಿದಂತೆ ಖಾಸಗಿ ಆಸ್ಪತ್ರೆಯ ವೈದ್ಯರು ಒಡಂಬಡಿಕೆಯ ಪ್ರಕಾರ ಆಸ್ಪತ್ರೆಗೆ ಬರುತ್ತಾರೆ.ಶೇ 95ರಷ್ಟು ಔಷಧಿಗಳು ನಮ್ಮ ಡಿಸ್ಪೆನ್ಸರಿಯಲ್ಲಿರುತ್ತದೆ. ಕ್ಯಾನ್ಸರ್‌ನಂತಹ ಹಲವು ದುಬಾರಿ ಬೆಲೆಯ ಔಷಧಿಯನ್ನು ಇಲ್ಲಿ ಇಟ್ಟು ಕೊಂಡಿರುವುದಿಲ್ಲ.ಟೆಂಡರ್ ಮೂಲಕ ತರಿಸಬೇಕಾಗುತ್ತದೆ.ಈ ಪ್ರಕರಣದಲ್ಲಿ 18ರಂದು ಟೆಂಡರ್ ಮೂಲಕ ಔಷಧಿ ನೀಡಲು ವ್ಯವಸ್ಥೆ ಆಗಿದೆ ಮುಂದಿನ ಮೂರು ದಿನಗಳಲ್ಲಿ ಅವರಿಗೆ ಔಷಧಿ ದೊರೆಯಲಿದೆ.ಹಿಂದೆ ಅವರು ಔಷಧಿಗಾಗಿ ವೆಚ್ಚಮಾಡಿದ ಮೊತ್ತವನ್ನು ಅವರಿಗೆ ಮರುಪಾವತಿಸಲು ಕ್ರಮ ಕೈ ಗೊಳ್ಳಲಾಗಿದೆ-ಇಎಸ್‌ಐ ಆಸ್ಪತ್ರೆಯ ಅಧೀಕ್ಷಕ ಡಾ.ಅಶೋಕ್ ಕುಮಾರ್ ನಾಯ್ಕ