ಶ್ರೀ ಮಹಾವೀರ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರಗೋಷ್ಠಿ ಉದ್ಘಾಟನೆ

Update: 2017-01-20 17:43 GMT

ಮೂಡುಬಿದಿರೆ , ಜ.20 : ಭಾರತವು ವಿಶ್ವದಲ್ಲಿಯೇ ಪ್ರಮುಖ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದ್ದು, ದೇಶದ ಅರ್ಥವ್ಯವಸ್ಥೆಯಲ್ಲಿ ಭೂಮಿಯ ಸಮರ್ಪಕ ನಿರ್ವಹಣೆಯು ಅತ್ಯಂತ ಅಗತ್ಯವಾಗಿದೆ. ದೇಶದ ಆರ್ಥಿಕ ಬೆಳವಣಿಗೆಯನ್ನು ಗಮನಿಸಿದಾಗ ಗ್ರಾಮೀಣ ಪ್ರದೇಶಗಳಿಗೂ ನಗರ ಪ್ರದೇಶಗಳಿಗೂ ಬೆಳವಣಿಗೆಯ ವೇಗದಲ್ಲಿ ಬಹಳಷ್ಟು ವೆತ್ಯಾಸವಿದ್ದು, ಸರಕಾರವು ಈ ನಿಟ್ಟಿನಲ್ಲಿ ಸೂಕ್ತ ನೀತಿ ನಿಯಮಾವಳಿಗಳನ್ನು ಜಾರಿ ಗೊಳಿಸಿ ಸಮಾನತೆಯನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಮೂಡುಬಿದಿರೆ ಸ್ಟೇಟ್ ಬ್ಯಾಂಕ್ ಅಫ್ ಮೈಸೂರು ಶಾಖಾ ಪ್ರಬಂಧಕ ಗುರುಪ್ರಸಾದ ಕೆ ಹೇಳಿದರು.

 ಅವರು ಶ್ರೀ ಮಹಾವೀರ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಒಕ್ಕೂಟದ ಸಹಯೋಗದೊಂದಿಗೆ ’ಭೂಮಿ ಅರ್ಥವ್ಯವಸ್ಥೆ: ಸಮಸ್ಯೆಗಳು ಮತ್ತು ಸವಾಲುಗಳು’ ಕುರಿತು ಯುಜಿಸಿ ಪ್ರಾಯೋಜಿತ ಎರಡು ದಿನಗಳ ಕಾಲ ನಡೆಯುವ ರಾಷ್ಟ್ರೀಯ ವಿಚಾರಗೋಷ್ಠಿಯನ್ನು ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರದಂದು ಉದ್ಘಾಟಿಸಿ ಮಾತನಾಡಿದರು.

 ಬೆಂಗಳೂರಿನ ಅಜಿಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಎ ನಾರಾಯಣ ತಮ್ಮ ಶಿಖರೋಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ನಿಟ್ಟೆಯ ಜಸ್ಟಿಸ್ ಕೆ ಎಸ್ ಹೆಗ್ಡೆ ಆಡಳಿತ ಸಂಸ್ಥೆಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಹಾಗೂ ಕರ್ನಾಟಕ ಸರಕಾರದ ಯೋಜನಾ ಮಂಡಳಿಯ ವಿಶ್ರಾಂತ ಸದಸ್ಯರಾಗಿರುವ ಡಾ ಜಿ ವಿ ಜೋಶಿ ಮತ್ತು ಜಸ್ಟಿಸ್ ಕೆ ಎಸ್ ಹೆಗ್ಡೆ ಆಡಳಿತ ಸಂಸ್ಥೆಯ ಶೈಕ್ಷಣಿಕ ಮಂಡಳಿಯ ಅಧ್ಯಕ್ಷ ಹಾಗೂ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧ್ಯಕ್ಷ ಡಾ ಎನ್ ಕೆ ತಿಂಗಳಾಯರ ಸಂಪಾದಕತ್ವದ ’ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಒಕ್ಕೂಟ: ಮೂರು ದಶಕಗಳ ಪಯಣ’ ಎಂಬ ಕಿರು ಹೊತ್ತಗೆಯನ್ನು ಬಿಡುಗಡೆಗೊಳಿಸಲಾಯಿತು. ಸಂಪಾದಕ ಡಾ ಜಿ ವಿ ಜೋಶಿ ಹೊತ್ತಗೆಯ ಕುರಿತು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಪತ್ ಸಾಮ್ಯಾಜ್ಯ ಮಾತನಾಡಿ, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಭೂಮಿ ಒಂದು ಪ್ರಮುಖ ಸಂಪನ್ಮೂಲವಾಗಿದ್ದು, ಇದನ್ನು ಪರಿಪೂರ್ಣವಾಗಿ ಬಳಸಿಕೊಳ್ಳವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಪ್ರಭಾರ ಪ್ರಾಚಾರ್ಯ ಡಾ. ವಾಮನ ಬಾಳಿಗ ಮತ್ತು ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ರಮೇಶ ಭಟ್ ಉಪಸ್ಥಿತರಿದ್ದರು.

 ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿನಿ ಕು. ದಿವ್ಯ ಪ್ರಾರ್ಥಿಸಿದರು. ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಒಕ್ಕೂಟ ಕಾರ್ಯದರ್ಶಿ, ವಿಚಾರಗೋಷ್ಠಿ ಸಂಯೋಜಕ ಹಾಗೂ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಒಕ್ಕೂಟದ ಅಧ್ಯಕ್ಷ ಪ್ರೊ. ಚಂದ್ರ.ಕೆ ವಂದಿಸಿದರು. ವಿಚಾರಗೋಷ್ಠಿಯ ಸಹ ಸಂಯೋಜಕಿ ವಿಜಯಲಕ್ಷ್ಮೀ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News