ದಡಾರ-ರುಬೆಲ್ಲಾ ಲಸಿಕಾ ಅಭಿಯಾನದ ತರಬೇತಿ

Update: 2017-01-20 18:53 GMT

 ಮಂಗಳೂರು, ಜ.20: ಪುತ್ತೂರು ಪುರಭವನದಲ್ಲಿ ತಾಲೂಕಿನ ಎಲ್ಲ ಶಾಲಾ ಮುಖ್ಯ ಶಿಕ್ಷಕ ಹಾಗೂ ನೋಡಲ್ ಶಿಕ್ಷಕರಿಗೆ ದಡಾರ -ರುಬೆಲ್ಲಾ ಲಸಿಕಾ ಅಭಿಯಾನದ ಕುರಿತು ತರಬೇತಿಯನ್ನು ಆಯೋಜಿಸಲಾಯಿತು.

 ಪುರಸಭಾ ಆಯುಕ್ತ ರೂಪಾ ಮಾತನಾಡಿ, ಆರೋಗ್ಯ ಇಲಾಖೆ ಹಮ್ಮಿಕೊಂಡ ಈ ಅಭಿಯಾನದಲ್ಲಿ ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಂಡು ಶಾಲೆಗಳಲ್ಲಿ ಎಲ್ಲ ಮಕ್ಕಳು ಲಸಿಕೆ ಪಡೆದುಕೊಂಡು ಶೇ.100 ಸಾಧನೆಯಾಗುವಂತೆ ಸಹಕರಿಸ ಬೇಕೆಂದು ಕರೆ ನೀಡಿದರು. ಜಿಲ್ಲಾ ಆರ್.ಸಿ.ಎಚ್ ಅಕಾರಿ ಡಾ.ಎಚ್ ಅಶೋಕ್ ದಡಾರ-ರುಬೆಲ್ಲಾ ಕಾಯಿಲೆಯ ಲಕ್ಷಣಗಳು, ತೊಡಕುಗಳು, ತಡೆಗಟ್ಟುವಿಕೆಯ ಕುರಿತು ಹಾಗೂ ದಡಾರ - ರುಬೆಲ್ಲಾ ಲಸಿಕಾ ಅಭಿಯಾನ-2017 ಅನುಷ್ಠಾನದಲ್ಲಿ ಶಿಕ್ಷಕರಿಗೆ ಇರುವ ಪಾತ್ರದ ಬಗ್ಗೆ ವಿವರಿಸಿದರು. ಪ್ರತಿ ಶಾಲೆಗಳಲ್ಲಿ ಅಧ್ಯಾಪಕ-ಪೋಷಕರ ಸಭೆ ನಡೆಸಿ 9 ತಿಂಗಳಿಂದ 15 ವರ್ಷದೊಳಗಿನ ಎಲ್ಲ ಮಕ್ಕಳು ಲಸಿಕೆ ಹಾಕಿಸಿಕೊಳ್ಳುವಂತೆ ಪೋಷಕರ ಮನವೊಲಿಸಬೇಕು ಮತ್ತು ಆರೋಗ್ಯ ಇಲಾಖೆಯು ಶಾಲೆಗಳಲ್ಲಿ ಹಮ್ಮಿಕೊಂಡಿರುವ ಲಸಿಕಾ ದಿನಗಳಂದು ಎಲ್ಲ ಶಿಕ್ಷಕರು ಸಹಕಾರ ನೀಡುವಂತೆ ಕೋರಿದರು.

ಇದೇ ವೇಳೆ ಪುತ್ತೂರು ಕ್ಷೇತ್ರ ಶಿಕ್ಷಣಾಕಾರಿ ಜಿ.ಎಸ್.ಶಶಿಧರ್ ಮಾತನಾಡಿ, ದಡಾರ - ರುಬೆಲ್ಲಾ ಲಸಿಕಾ ಅಭಿಯಾನದ ಕುರಿತು ಈಗಾಗಲೇ ಎಲ್ಲ ಶಾಲೆಗಳಿಗೆ ಸುತ್ತೋಲೆ ಕಳುಹಿಸಲಾಗಿದ್ದು, ಆರೋಗ್ಯ ಇಲಾಖೆ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುವಂತೆ ಶಿಕ್ಷಕರಿಗೆ ಹಾಗೂ ಮುಖ್ಯ ಶಿಕ್ಷಕರಿಗೆ ಸೂಚಿಸಿದರು.

ಪುತ್ತೂರು ತಾಲೂಕಿನ ಸುಮಾರು 312 ಶಾಲೆಯ ಮುಖ್ಯ ಶಿಕ್ಷಕರು ಹಾಗೂ ನೋಡಲ್ ಶಿಕ್ಷಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News