ಜ.24ಕ್ಕೆ ತುಳುನಾಡ ಗರಡಿಗಳ 2ನೆ ಮಹಾಸಮ್ಮೇಳನ

Update: 2017-01-20 18:57 GMT

 ಉಡುಪಿ, ಜ.20: ತಿಂಗಳೆ ಪ್ರತಿಷ್ಠಾನದ ವತಿಯಿಂದ ತುಳುನಾಡ ಗರಡಿಗಳ 2ನೆ ಮಹಾಸಮ್ಮೇಳನ ಹಾಗೂ ‘ದೇವಾರಾಧನೆ: ಸಮಗ್ರ ಚಿಂತನೆ’ ಜ.24ರಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿಯ ಸಂಚಾಲಕ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸಮ್ಮೇಳನವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬೆಳಗ್ಗೆ 10:30ಕ್ಕೆ ಉದ್ಘಾಟಿಸಲಿದ್ದಾರೆ. ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥರು ಆಶೀರ್ವಚನ ನೀಡುವರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಮೋಹನ್ ಆಳ್ವ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಅಪರಾಹ್ನ 12ರಿಂದ ‘ಭೂತಾರಾಧನೆ ಅವಲೋಕನ’ ಕುರಿತು ಗೋಷ್ಠಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಜನಪದ ವಿದ್ವಾಂಸರಾದ ಡಾ.ಅಮೃತ ಸೋಮೇಶ್ವರ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಡಾ.ಯು.ಪಿ.ಉಪಾಧ್ಯಾಯ, ಹರಿಕೃಷ್ಣ ಬಂಟ್ವಾಳ ಹಾಗೂ ಕಟಪಾಡಿ ಅಶೋಕ ಸುವರ್ಣರನ್ನು ಸನ್ಮಾನಿಸಲಾಗುವುದು ಎಂದರು.

ಅಪರಾಹ್ನ 2:30ರಿಂದ ‘ದೈವಾರಾಧನೆ ಭವಿಷ್ಯದ ಸವಾಲುಗಳು’ ಎಂಬ ವಿಷಯದ ಕುರಿತು ಗೋಷ್ಠಿ ನಡೆಯಲಿದ್ದು, ಸಂಜೆ 4ಕ್ಕೆ ಡಾ.ಮೋಹನ ಆಳ್ವ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಂದರ್ಭ ಮಂಗಳೂರಿನ ಉಮೇಶ ಪಂಬದ, ಎಲ್ಲೂರಿನ ನಾರಾಯಣ ಪಾಣ, ಮಾಳದ ಲೀಲಾ ಶೆಡ್ತಿ, ತತ್ರ ಕಲಾವಿದ ಕೊರಗ ಪಾಣರನ್ನು ಸನ್ಮಾನಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಪ್ರ.ಕಾರ್ಯದರ್ಶಿ ನೀರೆ ಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಗಂಗಾಧರ ಸುವರ್ಣ ಹಾಗೂ ಮಹಿಳಾ ಪ್ರಮುಖರಾದ ಶೀಲಾ ಕೆ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News