ಎಂಆರ್‌ಪಿಎಲ್‌ಗೆ ಬಲಾತ್ಕಾರದ ಭೂಸ್ವಾಧೀನ ಇಲ್ಲ: ದೇಶಪಾಂಡೆ

Update: 2017-01-21 06:56 GMT

ಮಂಗಳೂರು, ಜ.21: ಎಂಆರ್‌ಪಿಎಲ್‌ಗೆ ನಾಲ್ಕನೆ ಹಂತದ ಭೂಮಿಯನ್ನು ಬಲತ್ಕಾರದಿಂದ ಸ್ವಾಧೀನವಿಲ್ಲ ಎಂದು ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ನಗರದ ಕದ್ರಿ ದೇವಸ್ಥಾನಕ್ಕೆ ಶನಿವಾರ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಸರಕಾರ 1,001 ಎಕರೆ ಭೂಮಿಯನ್ನು ಸ್ವಾಧೀನಪಡಿಸಲು ಅಧಿಸೂಚನೆ ಹೊರಡಿಸಿದೆ. ಇದಕ್ಕೆ ರೈತರ ವಿರೋಧ ವ್ಯಕ್ತವಾಗಿರುವುದು ಗಮನಕ್ಕೆ ಬಂದಿದೆ. ಆದರೆ ಯಾವ ಕಾರಣಕ್ಕೂ ಬಲತ್ಕಾರದ ಭೂಸ್ವಾಧೀನವಿಲ್ಲ. ಏನೇ ಇದ್ದರೂ ರೈತರು, ಭೂಮಿಯ ಮಾಲಕರ ವಿಶ್ವಾಸವನ್ನು ತೆಗೆದುಕೊಳ್ಳಲಾಗುವುದು. ಅವರಿಗೆ ಯೋಗ್ಯ ಪರಿಹಾರ ನೀಡಿ ಭೂಮಿಯನ್ನು ಪಡೆಯಲು ಪ್ರಯತ್ನಿಸಲಾಗುವುದು ಎಂದು ದೇಶಪಾಂಡೆ ನುಡಿದರು.

ರಾಜ್ಯದ 17 ವಿವಿಗಳಲ್ಲಿ 500 ಕೋ.ರೂ.ನಷ್ಟು ಅವ್ಯವಹಾರ ನಡೆದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಈಗಾಗಲೇ ಉನ್ನತ ಶಿಕ್ಷಣ ಸಚಿವರು ಪ್ರತಿಕ್ರಿಯಿಸಿದ್ದಾರೆ. ಹಗರಣದ ಬಗ್ಗೆ ಪಾರದರ್ಶಕ ತನಿಖೆ ನಡೆದರೆ ಸತ್ಯಾಂಶ ಹೊರಬೀಳಲಿದೆ. ತಪ್ಪಿತಸ್ಥರು ಯಾರೇ ಆಗಲಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಹೇಳಿದರು.

ಈ ವೇಳೆ ಅವರು ಕದ್ರಿ ದೇವಳಕ್ಕೆ 12 ಕೆ.ಜಿ.ಯ 24 ಲಕ್ಷ ರೂ. ವೌಲ್ಯದ ಬೆಳ್ಳಿಯ ಮುಖ ಮಂಟಪವನ್ನು ಅರ್ಪಿಸಿದರು.

ಸಚಿವರೊಂದಿಗೆ ಈ ಸಂದರ್ಭ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಉದ್ಯಮಿ ಎ.ಜೆ.ಶೆಟ್ಟಿ, ಕೊಂಕಣಿ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News