ಬೈಕ್‌ಗಳ ಡಿಕ್ಕಿ: ಓರ್ವ ಸಾವು - ಇಬ್ಬರು ಗಂಭೀರ
ಉಪ್ಪಿನಂಗಡಿ,ಜ.21: ಬೈಕ್‌ಗಳೆರಡು ಡಿಕ್ಕಿಯಾದ ಪರಿಣಾಮ ಒಂದು ಬೈಕ್ ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿಯೋರ್ವರಿಗೆ ಡಿಕ್ಕಿ ಹೊಡೆದು, ಬಳಿಕ ರಸ್ತೆ ಬದಿಯ ಸೂಚನಾ ಫಲಕಕ್ಕೆ ಢಿಕ್ಕಿ ಹೊಡೆದ ಘಟನೆ ಶುಕ್ರವಾರ ತಡರಾತ್ರಿ ಉಪ್ಪಿನಂಗಡಿಯಲ್ಲಿ ನಡೆದಿದ್ದು, ಘಟನೆಯಿಂದ ಬೈಕ್ ಸವಾರ ಮೃತಪಟ್ಟರೆ, ಸಹಸವಾರ ಹಾಗೂ ಪಾದಚಾರಿ ಗಂಭೀರ ಗಾಯಗೊಂಡಿದ್ದಾರೆ.
ಘಟನೆಯಿಂದ ಬೈಕ್ ಸವಾರ 34ನೇ ನೆಕ್ಕಿಲಾಡಿ ನಿವಾಸಿ ಯು.ಟಿ. ಮುಹಮ್ಮದ್ ಅಝೀಮ್ (25) ಮೃತಪಟ್ಟಿದ್ದು, ಸಹ ಸವಾರ ಸಫ್ವಾನ್ (22) ಹಾಗೂ ಪಾದಚಾರಿ ಇರ್ಫಾನ್ (19) ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯ ವಿವರ: ಗಾಂಧಿಪಾರ್ಕ್ ಕಡೆಯಿಂದ ಅಝೀಮ್ ಅವರು ಬೈಕ್ ಚಲಾಯಿಸಿಕೊಂಡು ಬಂದಿದ್ದು, ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿಯ ಬದಿಯ ಪೆಟ್ರೋಲ್ ಪಂಪ್ ಬಳಿ ಓವರ್‌ಟೇಕ್ ಮಾಡುವ ಸಂದರ್ಭ ಬೈಕೊಂದಕ್ಕೆ ಇವರ ಬೈಕ್ ಡಿಕ್ಕಿಯಾಗಿದೆ. ಈ ಸಂದರ್ಭ ಚಾಲಕನ ನಿಯಂತ್ರಣ ಕಳೆದುಕೊಂಡ ಬೈಕ್ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯೋರ್ವರಿಗೆ ಡಿಕ್ಕಿ ಹೊಡೆದು ಬಳಿಕ ರಸ್ತೆ ಬದಿಯಲ್ಲಿದ್ದ ರಸ್ತೆ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆಯಿತು. ಘಟನೆಯಿಂದ ಗಂಭೀರ ಗಾಯಗೊಂಡು ಅಝೀಮ್ ಮೃತಪಟ್ಟರೆ, ಬೈಕ್ ಸಹ ಸವಾರ ಹಾಗೂ ಪಾದಚಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.