×
Ad

ಸಮುದ್ರದಲ್ಲಿ ಶಿವಾಜಿ ಸ್ಮಾರಕ ಮಾಡಲು ಬಿಡುವುದಿಲ್ಲ, ಬಿಜೆಪಿಗೆ ಮತ ನೀಡುವುದಿಲ್ಲ: ಮಹಾರಾಷ್ಟ್ರ ಮೀನುಗಾರರ ಸಂಘಟನೆ

Update: 2017-01-21 15:01 IST

ಮುಂಬೈ, ಜ.21: ರೂ.3,600 ಕೋಟಿ ವೆಚ್ಚದ ಶಿವಾಜಿ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ ನಾಲ್ಕು ವಾರಗಳ ನಂತರ ಅಖಿಲ್ ಮಹಾರಾಷ್ಟ್ರ ಮಚ್ಚಿಮಾರ್ ಕೃತಿ ಸಮಿತಿ ಹೇಳಿಕೆಯೊಂದನ್ನು ನೀಡಿ ಮುಂಬರುವ ಮುಂಬೈ ಹಾಗೂ ಇತರ ಸ್ಥಳೀಯಾಡಳಿತಗಳ ಚುನಾವಣೆಯಲ್ಲಿ ಮೀನುಗಾರರು ಬಿಜೆಪಿಗೆ ಮತ ನೀಡುವುದಿಲ್ಲ ಎಂದು ಘೋಷಿಸಿದೆ. ಫೆಬ್ರವರಿ 21ರಂದು ಬಿಎಂಸಿ, 25 ಜಿಲ್ಲಾ ಪರಿಷದ್ ಗಳು ಹಾಗೂ 283 ಪಂಚಾಯತ್ ಸಮಿತಿಗಳಿಗೆ ಚುನಾವಣೆಗಳು ನಡೆಯಲಿವೆ.

‘‘ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಭೂಮಿಪುತ್ರನಿಗೆ ಅವಮಾನ ಮಾಡಿದ್ದಾರೆ. ಕೇವಲ ಭೂಮಿಪೂಜೆಗೆ ರೂ.25 ಕೋಟಿ ವಿನಿಯೋಗಿಸಲಾಗಿದೆ. ನಾವು ಈ ಸ್ಮಾರಕ ತಲೆಯೆತ್ತಲು ಬಿಡುವುದಿಲ್ಲ. ನಾವು ಕೇವಲ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮತ ನೀಡುತ್ತೇವೆ’’ ಎಂದು ಸಮಿತಿಯ ಅಧ್ಯಕ್ಷ ದಾಮೋದರ್ ತಾಂಡೆಲ್ ಹೇಳಿದ್ದಾರೆ.

ಇತರ ಹಿಂದುಳಿದ ವರ್ಗಗಳು ಜತೆಯಾಗಿ ಜನವರಿ 26ರಂದು ತಮ್ಮದೇ ರಾಜಕೀಯ ಪಕ್ಷವಾದ ಬಹುಜನ್ ಒಬಿಸಿ ಸಂಘರ್ಷ ಸೇನಾ ಸ್ಥಾಪಿಸುವುದಾಗಿಯೂ ಅವರು ತಿಳಿಸಿದರು.

ಮೀನುಗಾರರು ಈ ಸ್ಮಾರಕ ಯೋಜನೆಯ ವಿರೋಧಿಗಳಲ್ಲ. ಬದಲಾಗಿ ಸ್ಮಾರಕ ನಿರ್ಮಿಸಲುದ್ದೇಶಿಸಲಾಗಿರುವ ಸ್ಥಳಕ್ಕೆ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮೀನುಗಳು ಮರಿಯಿಡುವ ಸ್ಥಳದಲ್ಲಿ ಈ ಸ್ಮಾರಕ ನಿರ್ಮಾಣವಾಗುವುದರಿಂದ ಮೀನು ಸಂತತಿಗೆ ಅಪಾಯವಿದೆಯೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸ್ಮಾರಕ ಮೇಲೇಳಲಿರುವ ಪ್ರದೇಶದಲ್ಲಿ ಸುಮಾರು 40 ಜಾತಿಯ ಏಡಿಗಳು, ಚಿಪ್ಪು ಮೀನು ಹಾಗೂ ಇತರ ಜಲಚರಗಳಿವೆ. ಸ್ಮಾರಕ ತಲೆಯೆತ್ತಿದ್ದೇ ಆದಲ್ಲಿ ಇವುಗಳೆಲ್ಲವೂ ನಾಶಗೊಳ್ಳುವವು’’ ಎಂದು ತಾಂಡೆಲ್ ಹೇಳಿದ್ದಾರೆ.

ಯೋಜನೆ ಆರಂಭಿಸುವ ಮುನ್ನ ವಿವಿಧ ಷರತ್ತುಗಳನ್ನು ಪೂರೈಸಬೇಕೆಂದು ಸಂಬಂಧಿತ ಇಲಾಖೆಗಳಿಗೆ ನೆನಪಿಸಲು ಮಾಜಿ ಪೊಲೀಸ್ ಆಯುಕ್ತರು, ಪರಿಸರ ಮತ್ತು ಅರಣ್ಯ ಸಚಿವಾಲಯ ಹಾಗೂ ನೌಕಾದಳ ಅಧಿಕಾರಿಗಳು ಬರೆದ ಪತ್ರವನ್ನು ಮುಂದಿಟ್ಟ ತಾಂಡೇಲ್, ಯೋಜನೆಗೆ ಸಂಬಂಧಿಸಿದಂತೆ ವಿವಿಧ ವಿಚಾರಗಳನ್ನು ಚರ್ಚಿಸದೇ ಇರುವಾಗ ಅದಕ್ಕೆ ದೊರೆತ ನಿರಪೇಕ್ಷಣಾ ಪತ್ರವನ್ನು ಪರಿಗಣಿಸಬಹುದೇ ಎಂದ ಪ್ರಶ್ನಿಸಿದ್ದಾರೆ.

ಮೇಲಾಗಿ ಈ ಯೋಜನೆಗೆ ಅಗತ್ಯವಾದ ರೂ.3,600 ಕೋಟಿಯಷ್ಟು ಹಣವನ್ನು ಸರಕಾರ ಎಲ್ಲಿಂದ ತರುವುದು ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News