ಭಾರತೀಯ ಸೈನಿಕ ಚಂದು ಚವಾಣ್‌ರನ್ನು ಬಿಡುಗಡೆಗೊಳಿಸಿದ ಪಾಕಿಸ್ತಾನ

Update: 2017-01-21 15:33 GMT

 ಹೊಸದಿಲ್ಲಿ, ಜ.21: ಕಳೆದ ವರ್ಷ ಪ್ರಮಾದವಶಾತ್ ಗಡಿ ದಾಟಿ ಹೋಗಿದ್ದ ಭಾರತೀಯ ಯೋಧ ಚಂದು ಬಾಬುಲಾಲ್ ಚವಾಣ್‌ರನ್ನು ಪಾಕಿಸ್ತಾನ ಪ್ರಾಧಿಕಾರ ಶನಿವಾರ ಬಿಡುಗಡೆ ಮಾಡಿದೆ.

ಚವಾಣ್ ಪಂಜಾಬ್‌ನ ವಾಘಾ ಗಡಿಯ ಮೂಲಕ ಮಧ್ಯಾಹ್ನ 3 ಗಂಟೆಗೆ ಭಾರತಕ್ಕೆ ವಾಪಸಾಗಿದ್ದಾರೆ. ಅವರನ್ನು ವಿಚಾರಣೆ ನಡೆಸಿದ ಬಳಿಕ ವಿಶೇಷ ವೈದ್ಯಕೀಯ ತಪಾಸಣೆಗೆ ಗುರಿಪಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಭಾರತದ ಸೇನೆ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಉಗ್ರಗಾಮಿಗಳ ಶಿಬಿರದ ಮೇಲೆ ಸರ್ಜಿಕಲ್ ಸ್ಟ್ರೈಕ್(ಸೀಮಿತ ದಾಳಿ) ನಡೆಸಿದ ಕೆಲವೇ ಗಂಟೆಗಳ ಬಳಿಕ 37 ರಾಷ್ಟ್ರೀಯ ರೈಫಲ್ಸ್‌ಗೆ ಸೇರಿರುವ ಯೋಧ ಚವಾಣ್ ಕಾಶ್ಮೀರದಲ್ಲಿ ಆಕಸ್ಮಿಕವಾಗಿ ಗಡಿ ದಾಟಿದ್ದರು.

21ರ ಹರೆಯದ ಚವಾಣ್ ಮೂಲತಃ ಮಹಾರಾಷ್ಟ್ರದ ಧುಳೆ ಜಿಲ್ಲೆಯ ಬೊರ್‌ವಿಹಿರಿ ಗ್ರಾಮದವರಾಗಿದ್ದರು.

ಚವಾಣ್‌ರನ್ನು ವಿಚಾರಣೆಗೆ ಗುರಿಪಡಿಸಿದ ಬಳಿಕ ಬಿಡುಗಡೆ ಮಾಡಲಾಗುತ್ತದೆ ಎಂದು ಪಾಕಿಸ್ತಾನ ಸರಕಾರ ತಮಗೆ ಭರವಸೆ ನೀಡಿದೆ ಎಂದು ಜ.12 ರಂದು ಕೇಂದ್ರ ಸರಕಾರದ ರಕ್ಷಣಾ ಖಾತೆಯ ರಾಜ್ಯ ಸಚಿವ ಸುಭಾಶ್ ಭಾಮ್ರಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News