ಕನ್ನಡ ಶಾಲೆಗಳು ಎಂದಿಗೂ ಸೋಲಬಾರದು : ಡಾ.ಮೋಹನ್ ಆಳ್ವ
ಕೊಣಾಜೆ , ಜ.21 : ಇಂದು ಕನ್ನಡ ಮಾಧ್ಯಮ ಶಾಲೆಗಳ ಪ್ರಭಾವ ಕಡಿಮೆಯಾಗುತ್ತಿದ್ದು,ಒಂದು ವೇಳೆ ಕನ್ನಡ ಮಾಧ್ಯಮ ಶಾಲೆಗಳು ಸೋತರೆ ನಾವು, ನಮ್ಮ ಸಂಸ್ಕೃತಿ ಸೋತಂತೆ. ನಾವುಗಳು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಇದೆ ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಅವರು ಹೇಳಿದರು.
ಅವರು ಶುಕ್ರವಾರದಂದು ಪಾವೂರು-ಹರೇಕಳದ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯ ಸ್ವರ್ಣ ಮಹೋತ್ಸವದ ಸಮಾಪನ ಕಾರ್ಯಕ್ರಮದಲ್ಲಿ ಶಾಲೆಯ"ಸ್ವರ್ಣ ಕಲಶ"ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕನ್ನಡ ಶಾಲೆಗಳನ್ನು ಕಟ್ಟಿ ನಾವಿಂದು 50,70 ವರುಷಗಳನ್ನು ಪೂರೈಸಿದ್ದೇವೆಯೇ ಹೊರತು ಅದನ್ನು ಕಾಲ,ಕಾಲಕ್ಕೆ ತಕ್ಕಂತೆ ಮೇಲ್ದರ್ಜೆಗೇರಿಸುವ ಪ್ರಾಮಾಣಿಕ ಪ್ರಯತ್ನವೇ ನಡೆಸಿಲ್ಲ. ಕನ್ನಡ ಮಾಧ್ಯಮಗಳಲ್ಲಿ ಸರಕಾರಿ ಮತ್ತು ಅನುದಾನಿತ ಎಂಬ ಪದಗಳ ಬಳಕೆಯೇ ದೊಡ್ಡ ಕಳಂಕವಾಗಿದೆ. ರಾಜ್ಯ ಸರಕಾರವು ಕನ್ನಡ ಮಾಧ್ಯಮ ಶಾಲೆಗಳಿಗೆ ವರುಷಕ್ಕೆ 17,700 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದ್ದರೂ ಶಾಲೆಗಳನ್ನು ಮೇಲ್ದರ್ಜೆಗೇರಿಸುವ ಪ್ರಯತ್ನ ಮಾಡಿಲ್ಲ . ಪರಿಣಾಮ ಪೋಷಕರು ಖಾಸಗಿ ವಿದ್ಯಾಸಂಸ್ಥೆಗಳಿಗೇ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎಂದು ಹೇಳಿದರು.
ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದ ಶ್ರೀಕ್ಷೇತ್ರ ಒಡಿಯೂರಿನ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಭಾರತೀಯ ಸಂಸ್ಕೃತಿಯು ಆಧ್ಯಾತ್ಮಿಕ ನೆಲೆಯಲ್ಲಿ ನಿಂತಿದೆ. ವೃತ್ತಿಗಾಗಿ ಶಿಕ್ಷಣವು ಅಗತ್ಯವಾಗಿದ್ದರೆ,ಪರಿಪೂರ್ಣ ವ್ಯಕ್ತಿತ್ವಕ್ಕಾಗಿ ಮೌಲ್ಯಾಧರಿತ ಆಧ್ಯಾತ್ಮಿಕ ಶಿಕ್ಷಣ ಅತ್ಯಗತ್ಯವಾಗಿದೆ.ಆಧುನಿಕತೆಯ ಜತೆಗೆ ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.
ಸ್ವರ್ಣ ಮಹೋತ್ಸವದ ಅಂಗವಾಗಿ ದಾನಿಗಳ ಸಹಕಾರದಲ್ಲಿ ಶಾಲಾ ಆವರಣದಲ್ಲಿ ನಿರ್ಮಿಸಲಾದ ನೂತನ ಆಧುನಿಕ ಶೌಚಾಲಯವನ್ನು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕರಾದ ಅಜಿತ್ ಕುಮಾರ್ ರೈ ಮಾಲಾಡಿ ಅವರು ಉದ್ಘಾಟಿಸಿದರು.
ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಡಿಸೋಜಾ,ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು, ಸಂತ ಸೆಬೆಸ್ತಿಯನ್ ಧರ್ಮಕೇಂದ್ರ ಪೆರ್ಮನ್ನೂರಿನ ಧರ್ಮಗುರುಗಳಾದ ರೆ.ಫಾ.ಜೆ.ಬಿ ಸಲ್ದಾನ, ಶ್ರೀ ದೇವಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸದಾನಂದ ಶೆಟ್ಟಿ, ಮುಂಬೈ ಕೈಗಾರಿಕೋದ್ಯಮಿ ವಿವೇಕ್ ಶೆಟ್ಟಿ ಬೊಳ್ಯಗುತ್ತು, ಕರ್ನಾಟಕ ಬ್ಯಾಂಕ್ ಪ್ರದಾನ ಕಚೇರಿ ಜನರಲ್ ಮ್ಯಾನೇಜರ್ ಚಂದ್ರಶೇಖರ್ ರಾವ್ ಬಿ, ಬಶೀರ್ ಕೂಳೂರು, ಸ್ಥಳೀಯ ಮುಖಂಡರಾದ ವಿಜಯ್ ಶಂಕರ್ ರೈ, ಕೆ.ಎನ್ ಆಳ್ವ, ಪ್ರಸಾದ್ ರೈ ಕಳ್ಳಿಮಾರ್, ಜಗಜೀವನ್ ಶೆಟ್ಟಿ, ಜಯರಾಮ ಆಳ್ವ, ಕಡೆಂಜ ಸೋಮಶೇಖರ್ ಚೌಟ, ಮನೋಜ್ ಕುಮಾರ್ ಹೆಗಡೆ, ಭರತ್ ರಾಜ್ ಶೆಟ್ಟಿ ಪಜೀರುಗುತ್ತು, ರಾಜೇಶ್ ಶೆಟ್ಟಿ ಪಜೀರುಗುತ್ತು, ಶಾಲಾ ಮುಖ್ಯೋಪಾಧ್ಯಾಯರಾದ ರವೀಂದ್ರ ರೈ ಹರೇಕಳ,ದೈಹಿಕ ಶಿಕ್ಷಕ ತ್ಯಾಗಂ ಹರೇಕಳ ಮೊದಲಾದವರು ಇದ್ದರು.
ಕಾರ್ಯಕ್ರಮದಲ್ಲಿ ರಾಮಕೃಷ್ಣ ಶಾಲೆಯ ನಿವೃತ್ತ ಮುಖ್ಯೋಪಾಧ್ಯಯರು ಹಾಗೂ ಹಿರಿಯ ಸಾಧಕರನ್ನು ಸನ್ಮಾನಿಸಲಾಯಿತು.