×
Ad

ಜಲ್ಲಿಕಟ್ಟು : ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಗೀಕಾರದ ನಿರೀಕ್ಷೆ

Update: 2017-01-21 19:22 IST

ಹೊಸದಿಲ್ಲಿ, ಜ.21: ತಮಿಳು ಜನರ ಸಾಂಸ್ಕೃತಿಕ ಆಕಾಂಕ್ಷೆಯನ್ನು ಈಡೇರಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು , ಜಲ್ಲಿಕಟ್ಟು ನಡೆಸುವುದಕ್ಕೆ ಅವಕಾಶ ಕೋರಿ ರಾಜ್ಯ ಸರಕಾರ ಕಳುಹಿಸಿರುವ ಸುಗ್ರೀವಾಜ್ಞೆಯನ್ನು ಅಂಗೀಕಾರಕ್ಕಾಗಿ ರಾಷ್ಟ್ರಪತಿಗಳಿಗೆ ಕಳುಹಿಸಿಕೊಟ್ಟಿರುವುದಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ತಮಿಳುನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಬಗ್ಗೆ ನಮಗೆ ಹೆಮ್ಮೆಯಿದೆ. ತಮಿಳುನಾಡಿನ ಅಭಿವೃದ್ಧಿಗೆ ಕೇಂದ್ರ ಸರಕಾರ ಬದ್ಧವಾಗಿದ್ದು ರಾಜ್ಯವು ಅಭಿವೃದ್ಧಿಯ ದಾರಿಯಲ್ಲಿ ಮುನ್ನಡೆಯಲು ಸದಾ ಪ್ರೋತ್ಸಾಹ ನೀಡಲಿದೆ ಎಂದು ಪ್ರಧಾನಿ ತಮ್ಮ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಜಲ್ಲಿಕಟ್ಟು ನಿಷೇಧದ ವಿರುದ್ಧದ ತೀರ್ಪನ್ನು ಒಂದು ವಾರ ಮುಂದೂಡಬೇಕೆಂಬ ಕೇಂದ್ರ ಸರಕಾರದ ಮನವಿಗೆ ಮಂಗಳವಾರ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿತ್ತು.

ಗೂಳಿ ಓಡಿಸುವ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಪ್ರಾಣಿಹಿಂಸೆಗೆ ಆಸ್ಪದ ನೀಡುತ್ತಿದೆ. ಇಲ್ಲಿ ಗೂಳಿಗಳನ್ನು ಹಿಂಸಿಸಿ, ಅದರ ಕಣ್ಣಿಗೆ ಮೆಣಸಿನ ಪುಡಿ ಎಸೆಯುವ ಮೂಲಕ ಗೂಳಿಗಳನ್ನು ಕೆರಳಿಸಲಾಗುತ್ತಿದೆ ಎಂದು ಹೇಳಿರುವ ಪ್ರಾಣಿಗಳ ಹಕ್ಕು ಹೋರಾಟ ಸಂಘಟನೆ, ಈ ಕ್ರೀಡೆಯನ್ನು ನಿಷೇಧಿಸಬೇಕೆಂದು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿತ್ತು.

ಆದರೆ ಈ ಆರೋಪ ಸರಿಯಲ್ಲ. ಜಲ್ಲಿಕಟ್ಟು ವಿರೋಧಿಸುವವರಿಗೆ ರಾಜ್ಯದ ಸಂಸ್ಕೃತಿಯ ಬಗ್ಗೆ ತಿಳಿದಿಲ್ಲ ಮತ್ತು ಈ ಬಗ್ಗೆ ಗೌರವವೂ ಇಲ್ಲ ಎಂದು ತಮಿಳುನಾಡಿನ ಲಕ್ಷಾಂತರ ಮಂದಿ ಜಲ್ಲಿಕಟ್ಟು ಮೇಲಿನ ನಿಷೇಧ ತೆರವಿಗೆ ಒತ್ತಾಯಿಸಿ ಪ್ರತಿಭಟನೆಗೆ ಇಳಿದಿದ್ದರು.ಪ್ರತಿಭಟನೆ ರಾಜಕೀಯ ರೂಪ ಪಡೆಯದಂತೆ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಎಚ್ಚರಿಕೆ ವಹಿಸಿದ್ದರು.

ಪ್ರಾಣಿಹಿಂಸೆಗೆ ಅವಕಾಶ ನೀಡದಂತೆ ಜಲ್ಲಿಕಟ್ಟು ಕ್ರೀಡೆ ನಡೆಸಲು ಅನುಮತಿ ನೀಡಿ ತಮಿಳುನಾಡು ಸರಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಇದಕ್ಕೆ ಒಪ್ಪಿಗೆ ನೀಡಿದ ಕೇಂದ್ರ ಸರಕಾರ ರಾಷ್ಟ್ರಪತಿಯ ಅನುಮೋದನೆಗಾಗಿ ಕಳುಹಿಸಿಕೊಟ್ಟಿದೆ. ಇದಕ್ಕೆ ರಾಷ್ಟ್ರಪತಿ ಅನುಮೋದನೆ ದೊರೆತ ಬಳಿಕ ತಮಿಳುನಾಡು ರಾಜ್ಯಪಾಲರು ಈ ಕುರಿತ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಸರಕಾರದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News