ಬಂಟ್ವಾಳ ಪೇಟೆ ಅಗಲೀಕರಣ ಸಭೆ ವಿಫಲ

Update: 2017-01-21 15:22 GMT

ಬಂಟ್ವಾಳ, ಜ. 21: ಮೊದಲು ಮೂಲಭೂತ ಸೌಕರ್ಯಗಳನ್ನು ಒದಗಿಸಿ,  ಬಳಿಕವೇ ಬಂಟ್ವಾಳ ಪೇಟೆ ಅಗಲೀಕರಣ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಿ ಎಂಬ ಆಗ್ರಹ ಬಂಟ್ವಾಳ ಪೇಟೆ ಅಗಲೀಕರಣ ನಿಟ್ಟಿನಲ್ಲಿ ಮಂಗಳೂರು ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ಅಧ್ಯಕ್ಷತೆಯಲ್ಲಿ ಶನಿವಾರ ಸಂಜೆ ಬಂಟ್ವಾಳ ಪುರಸಭೆ ಸಭಾಗಂಣದಲ್ಲಿ ನಡೆದ ಸಭೆಯಲ್ಲಿ ಕೇಳಿ ಬಂದವು.

ಹಲವು ವರ್ಷಗಳಿಂದ ಕೇವಲ ಸಭೆಯ ನಿರ್ಣಯಗಳಿಗಷ್ಟೇ ಸೀಮಿತಗೊಂಡು ನನೆಗುದಿಗೆ ಬಿದ್ದಿದ್ದ ಬಂಟ್ವಾಳ ಪೇಟೆ ಅಗಲೀಕರಣಕ್ಕೆ ಪ್ರಸ್ತುತ ಜಿಲ್ಲಾಧಿಕಾರಿ ಡಾ. ಜಗದೀಶ್ ಚುರುಕು ನೀಡಿದ್ದು ಮೊದಲ ಹಂತದ ಸರ್ವೇ ಕಾರ್ಯ ಕೂಡಾ ಪೂರ್ಣಗೊಂಡಿದೆ. ಆದರೆ ಪೇಟೆ ಅಗಲೀಕರಣಕ್ಕೆ ಬಂಟ್ವಾಳ ವರ್ತಕರು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ತಾರ್ಕಿಕ ಅಂತ್ಯ ನೀಡುವ ನಿಟ್ಟಿನಲ್ಲಿ ಮಂಗಳೂರು ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ಅಧ್ಯಕ್ಷತೆಯಲ್ಲಿ ಬಂಟ್ವಾಳ ಪೇಟೆಯ ವರ್ತಕರು, ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಲಾಯಿತು. ಸಭೆಯಲ್ಲಿ ಸುದೀರ್ಘ ಚರ್ಚೆ, ಮಾತಿನ ಚಕಮಕಿ ನಡೆದರೂ ಅಗಲೀಕರಣಕ್ಕೆ ಸಂಬಂಧಿಸಿ ಒಮ್ಮತದ ತೀರ್ಮಾನ ಕೈಗೊಳ್ಳುವಲ್ಲಿ ಸಭೆ ವಿಫಲವಾಯಿತು.

ಬಂಟ್ವಾಳ ಪೇಟೆ ಉಳಿಯಬೇಕೆಂಬ ದೃಷ್ಟಿಯಿಂದ ಈಗಾಗಲೇ ಕೋಟ್ಯಾಂತರ ರುಪಾಯಿ ವ್ಯಯಿಸಿ ಬೈಪಾಸ್ ರಸ್ತೆ ನಿರ್ಮಿಸಲಾಗಿದೆ. ಇನ್ನೂ ಬಂಟ್ವಾಳ ಪೇಟೆಯಲ್ಲಿ 9 ಮೀಟರ್‌ಗೆ ಅಗಲೀಕರಣ ಮಾಡಿದರೆ ಭಾಗಶಃ ಅಂಗಡಿಗಳು ನಾಶವಾಗಲಿದೆ. ಇದರಿಂದಾಗಿ ಬಡ ವ್ಯಾಪರೀಗಳು ತೊಂದರೆ ಅನುಭವಿಸಲಿದ್ದಾರೆ. ಅಂಗಡಿದಾರರು ಪುಟ್‌ಪಾತ್‌ಗಳಲ್ಲಿ ವಸ್ತುಗಳನ್ನಿಟ್ಟು ವ್ಯಾಪಾರ ಮಾಡುವುದನ್ನು ನಿಲ್ಲಿಸಿದರೆ ಹಾಗೂ ತಮ್ಮ ವಾಹನಗಳನ್ನು ತಮ್ಮ ಅಂಗಡಿಗಳ ಮುಂದೆ ಇಡದೆ ಪಾರ್ಕಿಂಗ್‌ಗೆ ಪರ್ಯಾಯ ವ್ಯವಸ್ಥೆ ಕೈಗೊಂಡರೆ ಬಂಟ್ವಾಳ ಪೇಟೆ ಸದ್ಯಕ್ಕೆ ಅಗಲೀಕರಣ ಬೇಡ ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್ ಅಧಿಕಾರಿಗಳಿಗೆ ಸಲಹೆ ನೀಡಿದರು.

ಇದಕ್ಕೆ ವರ್ತಕರ ಸಂಘದವರು ಬೆಂಬಲ ಸೂಚಿಸಿದರು.

ಬಂಟ್ವಾಳ ಪೇಟೆಯ ಅಗಲೀಕರಣಕ್ಕೆ ನಮ್ಮ ವಿರೋಧವಿಲ್ಲ. ಆದರೆ ಪೇಟೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ ಬಳಿಕವೇ ಪೇಟೆ ಅಗಲೀಕರಣ ಕಾರ್ಯ ಕೈಗೊಳ್ಳಿ ಎಂದು ವರ್ತಕತ ಸಂಘದ ಅಧ್ಯಕ್ಷ ಸುರೇಶ್ ಬಾಳಿಗ ಹೇಳಿದರು.

ರಸ್ತೆ ಅಗಲೀಕರಣದ ಬಗ್ಗೆ ಸಭೆ ನಡೆಸುವ ಮೊದಲು ಅಧಿಕಾರಿಗಳು ರಸ್ತೆಯನ್ನು ಪರಿಶೀಲನೆ ನಡೆಸಬೇಕು. ಈಗಾಗಲೇ ಕೈಕಂಬದಲ್ಲಿ ರಸ್ತೆ ಅಗಲೀಕರಣ ಮಾಡುವುದಾಗಿ ಹೊರಟು ವ್ಯಾಪಾರಿಗಳು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅದೇ ಪರಿಸ್ಥಿತಿ ಬಂಟ್ವಾಳ ಪೇಟೆಯಲ್ಲಿ ಆದರೆ ಹೇಗೆ ಎಂದು ಪುರಸಭಾ ಸದಸ್ಯ ಮುನೀಶ್ ಅಲಿ ಸಹಾಯಕ ಆಯುಕ್ತರನ್ನು ಪ್ರಶ್ನಿಸಿದರು.

ರಸ್ತೆ ಅಗಲೀಕರಣಕ್ಕೆ ಮುನ್ನ ವೈಜ್ಞಾನಿಕ ಸರ್ವೇ ಆಗಬೇಕು. ಪೇಟೆಯ ಎಲ್ಲ ವ್ಯಾಪಾರಿಗಳನ್ನು ವಿಶ್ವಾಸಕ್ಕೆ ಪಡೆದುಕೊಂಡೆ ಸರ್ವೇ ಕಾರ್ಯ ನಡೆಸಬೇಕು ಎನ್ನುವ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂತು. ಬೆಳಗ್ಗೆ 8 ಗಂಟೆಯಿಂದ 10, ಸಂಜೆ 4ರಿಂದ 7ರವರೆಗಿನ ಪೀಕ್ ಅವರ್‌ಗಳಲ್ಲಿ ಟ್ರಾಫಿಕ್ ಪೊಲೀಸ್ ನಿಯೋಜಿಸುವುದು. ಸ್ಥಳೀಯ ವ್ಯಾಪಾರೀಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ರಸ್ತೆ ಇಕ್ಕೆಲಗಳ ವೈಜ್ಞಾನಿಕ ಸರ್ವೆ ನಡೆಸುವುದು. ಪುಟ್‌ಪಾತ್‌ನಲ್ಲಿ ವ್ಯಾಪಾರ ನಡೆಸದೆ ಇರುವುದು. ಇದರಿಂದ ರಸ್ತೆ ಅಗಲೀಕರಣ ಬೇಕೆ? ಬೇಡವೇ ಎಂದು ತಿಳಿದುಕೊಳ್ಳುವುದು. ದೇವರಕಟ್ಟೆಯಲ್ಲಿ ಬಸ್ಸು ನಿಲುಗಡೆಗೆ ಅವಕಾಶ. ಬಡ್ಡಕಟ್ಟೆ ಸಾರ್ವಜನಿಕ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸುವುದು ಎಂದು ಸಭೆಯಲ್ಲಿ ಕೈಗೊಂಡ ಈ ತೀರ್ಮಾನಗಳನ್ನು ಜಿಲ್ಲಾಧಿಕಾರಿಯ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಸಹಾಯಕ ಆಯುಕ್ತ ರೇಣುಕ ಪ್ರಸಾದ್ ನಿರ್ಣಯ ಪ್ರಕಟಿಸಿದರು.

ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಯೋಜನಾ ನಿರ್ದೇಶಕ ಪ್ರಸನ್ನ, ತಹಶೀಲ್ದಾರ್ ಪುರಂದರಹೆಗ್ಡೆ, ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್, ಕೆಯುಡಿಸಿಯ ಎಂಜಿನಿಯರ್ ಶೋಭಲತಾ, ಪುರಸಭಾ ಸದಸ್ಯ ಪ್ರವೀಣ್ ಬಿ., ನಾಮನಿರ್ದೇಶಿತ ಸದಸ್ಯ ಪ್ರವೀಣ್ ಕಿಣಿ ಪ್ರಮುಖರಾದ ಪ್ರಕಾಶ್ ಅಂಚನ್, ವಿಶ್ವನಾಥ ಚೆಂಡ್ತಿಮಾರ್ ಚರ್ಚೆಯಲ್ಲಿ ಪಾಲ್ಗೊಂಡರು.

ವರ್ತಕರ ನಡುವೆಯೇ ವಾಗ್ವಾದ:

ಬಂಟ್ವಾಳ ಪೇಟೆ ಅಗಲೀಕರಣಕ್ಕೆ ಸಂಬಂಧಿಸಿ ಶನಿವಾರ ನಡೆದ ಸಭೆಯಲ್ಲಿ ಬಂಟ್ವಾಳ ವರ್ತಕರ ಸಂಘದ ಸದಸ್ಯರ ಮಧ್ಯೆಯೇ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿ ವಾಗ್ವಾದ ನಡೆದವು.

ಪೇಟೆ ಅಗಲೀಕರಣಕ್ಕೆ ವರ್ತಕರ ಸಂಘದ ಕೆಲವರು ವಿರೋಧ ವ್ಯಕ್ತಪಡಿಸಿದರೆ ಇನ್ನು ಕೆಲವರು ಅಗಲೀಕರಣಕ್ಕೆ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವರ್ತಕರ ನಡುವೆ ಪರಸ್ಪರ ಮಾತಿಕ ಚಕಮಕಿ ನಡೆದು ವಾಗ್ವಾದ ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News