×
Ad

ರಾಷ್ಟ್ರೀಯ ವಾಹಿನಿಯಲ್ಲಿ ಬಂದ ಕುಟುಂಬದ ಸ್ಥಿತಿ ಈಗ ಕೇಳುವವರಿಲ್ಲ !

Update: 2017-01-21 21:30 IST

ಕಾಸರಗೋಡು , ಜ.21  : ಎಂಡೋಸಲ್ಫಾನ್  ಕೀಟನಾಶಕದ  ದುಷ್ಪರಿಣಾಮದಿಂದ  ಕಾಸರಗೋಡು ಪೆರ್ಲದ  ಕುಟುಂಬದವೊಂದು ನಲುಗುತ್ತಿದೆ. ಪೆರ್ಲ ಸ್ವರ್ಗದ ಕೊಡಂಗೇರಿಯಲ್ಲಿನ ಚೆನ್ನಪ್ಪ ಶೆಟ್ಟಿ ಎಂಬವರ ಕುಟುಂಬ ಯಾವುದೇ ಆದಾಯ ಇಲ್ಲದೆ ಕೇವಲ ಪಿಂಚಣಿಯಲ್ಲೇ ಈ ಕುಟುಂಬ ಕಾಲಕಳೆಯುತ್ತಿದ್ದು , ಅತಂತ್ರ ಸ್ಥಿತಿಯಲ್ಲಿದೆ.  

ಎಂಡೋಸಲ್ಫಾನ್ ನಿಷೇಧಕ್ಕೆ ನಡೆದ ಹೋರಾಟದ ಸಂದರ್ಭದಲ್ಲಿ   ಈ ಕುಟುಂಬದ ವೇದನೆ  ವಿಶ್ವಕ್ಕೆ ಪರಿಚಯವಾಗಿತ್ತು . ಆದರೆ ಈಗ ಈ ಕುಟುಂಬದ ದುರಂತವನ್ನು ಕೇಳುವವರಿಲ್ಲದಂತಾಗಿದೆ.

2000 ರಲ್ಲಿ ಎಂಡೋಸಲ್ಫಾನ್ ವಿರುದ್ಧ ಹೋರಾಟ ನಡೆಯುತ್ತಿರುವ  ಸಂದರ್ಭದಲ್ಲಿ  ರಾಷ್ಟ್ರೀಯ ವಾಹಿನಿಯೊಂದರಲ್ಲಿ ಈ ಕುಟುಂಬದ ವೇದನೆ  ಪರಿಚಯವಾಗಿತ್ತು. ಶ್ರೀ ಪಡ್ರೆಯವರ ನೇತೃತ್ವದಲ್ಲಿ  ಹೊರಜಗತ್ತಿಗೆ ಇವರ ದಾರುಣ ಚಿತ್ರಣ  ಮತದಟ್ಟು ಮಾಡಲಾಗಿತ್ತು. ಇದು ಮಾತ್ರವಲ್ಲ ಅಂಬಿಕಾಸುತನ್ ಮಾಂಗಾಡ್ ಎಂಬ ಸಾಹಿತಿ ಬರೆದ 'ಎಣ್ಮಕಜೆ ' ಎಂಬ ಕಾದಂಬರಿ ಯಲ್ಲಿ ಈ ಕುಟುಂಬವನ್ನು ಪ್ರಮುಖವಾಗಿ  ಗುರುತಿಸಲಾಗಿತ್ತು .

ಆದರೆ ಇಂದಿಗೂ ಈ ಕುಟುಂಬದ  ದುಸ್ಥಿತಿ ಅಂದು ಹೇಗಿತ್ತೋ ಹಾಗೆಯೇ ಇಂದು ಕೂಡಾ  ಹಾಗೇನೇ ಇದೆ.  ರೋಗಕ್ಕೆ ತುತ್ತಾಗಿರುವ ಕುಟುಂಬ ಅನಾಥಾವಾಗುತ್ತಾ ಇದೆ.  ಸೂಕ್ತ ಮನೆ ಕೂಡಾ ಇವರಿಗಿಲ್ಲ.

ಎಂಡೋಸಲ್ಫಾನ್ ನಿಂದ  ರೋಗಕ್ಕೆ ತುತ್ತಾಗಿದ್ದ  ಚೆನ್ನಪ್ಪ ಶೆಟ್ಟಿ ಯವರ ಪುತ್ರ ಸುಧಾಕರ ಶೆಟ್ಟಿ ಕೆಲ ದಿನಗಳ ಹಿಂದೆ ಮೃತಪಟ್ಟಿದ್ದಾರೆ . 45 ವರ್ಷದ ಸುಧಾಕರ ಶೆಟ್ಟಿ ಯವರು  ಬೆಳವಣಿಗೆ ಕಾಣದೆ ಬಾಲಕರಂತಿದ್ದರು  . ಚೆನ್ನಪ್ಪ ಶೆಟ್ಟಿ ಮತ್ತು ಪತ್ನಿ ಮುತ್ತಕ್ಕ  ವೃದಾಪ್ಯದಲ್ಲಿದ್ದಾರೆ.

ಪುತ್ರಿ  ಕುಸುಮ ಮಾನಸಿಕ ಅಸ್ವಸ್ಥಳಾಗಿದ್ದು ಕೆಲ ವರ್ಷಗಳ  ಬಾವಿಗೆ  ಬಿದ್ದು  ಮೃತಪಟ್ಟಿದ್ದಳು. ಇನೋರ್ವ ಪುತ್ರಿ   ಸರಸ್ವತಿ ಎಂಡೋ ಸಂತ್ರಸ್ಥೆಯಾಗಿದ್ದಾಳೆ . ಇನ್ನೋರ್ವ ಪುತ್ರ ಕಿಟ್ಟಣ್ಣ ರಿಗೆ  ಬಾಯಿ ಬರುತ್ತಿಲ್ಲ. ಕುಟುಂಬ ಒಂದಲ್ಲ  ಒಂದು ರೀತಿಯ ದುರಂತದಿಂದಲೇ ಬದುಕುತ್ತಿದೆ.

ಕುಟುಂಬವು ಶಿಕ್ಷಣದಿಂದ ವಂಚಿತವಾಗಿದೆ. ಸರಕಾರದ ಸೌಲಭ್ಯಗಳಿದ್ದರೂ ಇವರ ಕುಟುಂಬಕ್ಕೆ ತಲಪುತ್ತಿಲ್ಲ .ಆರ್ಥಿಕ ಬೆಂಬಲವೂ ಕುಟುಂಬಕ್ಕಿಲ್ಲ. ಕುಟುಂಬದ ಯಾವ ಸದಸ್ಯ ಕೂಡಾ ಕೃಷಿ ಅಥವಾ ಕೂಲಿ ಕೆಲಸ ನಿರ್ವಹಿಸದಂತೆ ಜರ್ಜರಿತವಾಗಿದೆ.  ಆದರೆ ಇಂತಹ ಕುಟುಂಬದ ಬಗ್ಗೆ ಅಧಿಕಾರಿಗಳು ಕಣ್ತೆರೆದು ನೋಡಿಲ್ಲ.

ಕುಟುಂಬವು ಒಂದಲ್ಲ ಒಂದು ರೀತಿಯ   ದುರಂತ ಜೀವನ ಸವೆಸುತ್ತಿದೆ. ಇದೇ ರೀತಿ ನೂರಾರು ಎಂಡೋ ಸಂತ್ರಸ್ಥ ಕುಟುಂಬಗಳು ಇಂದಿಗೂ ನರಕದ ಜೀವನ ನಡೆಸುತ್ತಿದೆ.

ಇದೇ ರೀತಿ ಪೆರ್ಲ ಸ್ವರ್ಗದಲ್ಲಿರುವ  ಚೆನ್ನಪ್ಪ ಶೆಟ್ಟಿಯವರ ಕುಟುಂಬ  ನರಕ ಯಾತನೆ ಅನುಭವಿಸುತ್ತಿದೆ .ಯಾವುದೇ ಆರ್ಥಿಕ ಬೆಂಬಲ ಇಲ್ಲದೆ ಕೇವಲ ಪಿಂಚಣಿ ಯಿಂದ ಮಾತ್ರ ಈ ಕುಟುಂಬ ಬದುಕುತ್ತಿದ್ದು , ಮಾಧ್ಯಮಗಳ ಮೂಲಕ ಜಗತ್ತಿನ ಗಮನ ಸೆಳೆದ ಕುಟುಂಬ ಅತಂತ್ರ ಬದುಕು ಸವೆಸುತ್ತಿದೆ .

Writer - ಸ್ಟೀಫನ್ ಕಯ್ಯಾರ್

contributor

Editor - ಸ್ಟೀಫನ್ ಕಯ್ಯಾರ್

contributor

Similar News