×
Ad

ಕುಡಿಯುವ ನೀರು ಕಾಮಗಾರಿ ಶೀಘ್ರ ಮುಕ್ತಾಯಗೊಳಿಸಿ: ಸೊರಕೆ

Update: 2017-01-21 22:24 IST

ಉಡುಪಿ, ಜ.21: ಕಾಪು ವಿಧಾನಸಬಾ ಕ್ಷೇತ್ರದ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆ ಕುರಿತಂತೆ ಕೈಗೊಂಡಿರುವ ಕಾಮಗಾರಿಗಳ ಅನುಷ್ಠಾನದಲ್ಲಿ ಇರುವ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಿ, ಜನತೆಗೆ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಸೂಚಿಸಿದ್ದಾರೆ.

ಶನಿವಾರ ಉಡುಪಿ ತಾಪಂ ಸಭಾಭವನದಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಕರೆಯಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಕಾಮಗಾರಿಗಾಗಿ ಕಾರ್ಯಪಡೆಗೆ ಮೊದಲ ಹಂತದಲ್ಲಿ 40 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. 2ನೇ ಹಂತದಲ್ಲಿ 20 ಲಕ್ಷ ರೂ. ಬಿಡುಗಡೆಯಾಗಿದೆ. ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ಸೂಚಿಸಿದ ಅವರು, ಕಾಮಗಾರಿಗಳ ಮುಕ್ತಾಯದ ಜೊತೆಗೆ ಅಗತ್ಯವಿರುವ ಕಡೆಗಳಲ್ಲಿ ಹೊಸ ಬೋರ್‌ವೆಲ್ ಕೊರೆಯುವಿಕೆ, ಬಾವಿಗಳ ನಿರ್ಮಾಣ, ಪೈಪ್ ಲೈನ್ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವಂತೆಯೂ ಸೂಚಿಸಿದರು.

ಅನುದಾನದ ಕೊರೆತೆಯಿದ್ದಲ್ಲಿ ತಮ್ಮ ಶಾಸಕರ ನಿಧಿಯಿಂದ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ ಸಚಿವರು, ಕುಡಿಯುವ ನೀರಿನ ಕೆಲಸಗಳನ್ನು ಆದ್ಯತೆಯ ಮೇಲೆ ಮುಕ್ತಾಯಗೊಳಿಸುವಂತೆ ಆದೇಶಿಸಿದರು.ಕುಡಿಯುವ ನೀರು ಕಾಮಗಾರಿಗಳಿಗೆ ತುರ್ತಾಗಿ ವಿದ್ಯುತ್ ಸಂಪರ್ಕ ನೀಡುವಂತೆ ಹಾಗೂ ತಾತ್ಕಾಲಿಕವಾಗಿ ನೀಡಿರುವ ಸಂಪರ್ಕಗಳನ್ನು ಶಾಶ್ವತ ಸಂಪರ್ಕಗಳಾಗಿ ಪರಿವರ್ತಿ ಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೊರಕೆ ಸೂಚಿಸಿದರು.

 ರಸ್ತೆ ಕಾಮಗಾರಿಗಳ ಸಂದರ್ಭಗಳಲ್ಲಿ ಹಾನಿಯಾಗುವ ಪೈಪ್‌ಲೈನ್‌ಗಳನ್ನು ತಕ್ಷಣವೇ ದುರಸ್ತಿಗೊಳಿಸುವಂತೆ ಹಾಗೂ ಕಾಮಗಾರಿ ನಡೆಸುವ ಸಂದಭರ್ದಲ್ಲಿ ಸ್ಥಳೀಯ ಗ್ರಾಪಂಗಳೊಂದಿಗೆ ಪೈಪ್ ಲೈನ್ ಹಾದು ಹೋಗಿರುವ ಬಗ್ಗೆ ಚಿರ್ಚಿಸಿ ಕಾಮಗಾರಿ ಕೈಗೊಳ್ಳಿ. ಸಾಧ್ಯವಾದಷ್ಟು ಪೈಪ್‌ಲೈನ್‌ಗಳಿಗೆ ಹಾನಿಯಾಗದಂತೆ ಕಾರ್ಯ ನಿರ್ವಹಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೊರಕೆ ತಿಳಿಸಿದರು.

ಕಾಪು ಕ್ಷೇತ್ರದಲ್ಲಿ ನಿವೇಶನ ಹಂಚಿಕೆ ಹಲವು ವರ್ಷಗಳಿಂದ ಬಾಕಿ ಇದ್ದು, ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುವಂತೆ ತಿಳಿಸಿದರು. ಗ್ರಾಪಂಗಳಲ್ಲಿ ನಿವೇಶನ ಹಂಚಿಕೆ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ, ಮಂಜೂರಾತಿ ಹಂತದಲ್ಲಿರುವ ಮನೆಗಳಿಗೆ ಮಂಜೂರಾತಿ ಪತ್ರ ವಿತರಿಸುವಂತೆಯೂ ಅವರು ತಿಳಿಸಿದರು. ಅಶ್ರಯ ಯೋಜನೆಯಡಿ 585 ಮನೆಗಳು ಮಂಜೂರಾತಿ ಅಗಿದ್ದು, ಶೀಘ್ರದಲ್ಲಿ ತ್ರ ವಿತರಿಸಲಾಗುವುದು ಎಂದರು.

ಸಭೆಯಲ್ಲಿ ತಾಪಂ ಉಪಾಧ್ಯಕ್ಷ ರಾಜೇಂದ್ರ, ಜಿಪಂ ಸದಸ್ಯೆ ಚಂದ್ರಿಕಾ, ಶಿಲ್ಪಾ ಸುವರ್ಣ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಶೇಷಪ್ಪ ಉಪಸ್ಥಿತರಿದ್ದರು. ಅಲ್ಲದೇ ಕಾಪು ಕ್ಷೇತ್ರ ವ್ಯಾಪ್ತಿಯ ಗ್ರಾಪಂ ಅಧ್ಯಕ್ಷರು, ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಓಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News