×
Ad

ವಚನಕಾರರನ್ನು ಜಾತಿಗೆ ಸೀಮಿತಗೊಳಿಸದಿರಿ: ಡಾ. ನಾಗಪ್ಪ ಗೌಡ

Update: 2017-01-21 22:39 IST

ಮಂಗಳೂರು, ಜ. 21: ಯಾವುದೇ ವಚನಕಾರರು ಮತ್ತು ಸಮಾಜ ಸುಧಾರಕರನ್ನು ನಿರ್ದಿಷ್ಟ ಜಾತಿಗೆ ಸೀಮಿತಗೊಳಿಸುವುದು ಭಾರೀ ಅಪಾಯಕಾರಿಯಾಗಿದೆ. ಈ ಸಾಧಕರು ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆಯೇ ವಿನ: ಯಾವತ್ತೂ ಯಾವುದೇ ಜಾತಿಗೂ ಸೀಮಿತಗೊಂಡಿಲ್ಲ ಎಂದು ಮಂಗಳೂರು ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ. ನಾಗಪ್ಪ ಗೌಡ ಹೇಳಿದರು.

ದ.ಕ. ಜಿಲ್ಲಾಡಳಿತ, ದ.ಕ. ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಮೊಗವೀರ ವ್ಯವಸ್ಥಾಪಕ ಮಂಡಳಿ, ದ.ಕ. ಮತ್ತು ಉಡುಪಿ ಜಿಲ್ಲೆ, ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಯುವಕ ವೃಂದ ಮೂಲ್ಕಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ನಡೆದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ವೃತ್ತಿ ಮತ್ತು ಜಾತಿಗಳಲ್ಲಿ ಮೇಲು ಕೀಳು ಬೇಡ. ವಚನ ಸಾಹಿತ್ಯಗಳ ಮೂಲಕ ಆಧ್ಯಾತ್ಮಕ್ಕಿಂತ ಹೆಚ್ಚಾಗಿ ಹಸಿವು ಮತ್ತು ಬಡತನ ಹೋಗಲಾಡಿಸಲು ಹಾಗೂ ಮಾನವೀಯತೆ ವೌಲ್ಯಕ್ಕೆ ಅಪಾರ ಆದ್ಯತೆ ನೀಡಲಾಗಿದೆ. 12ನೆ ಶತಮಾನದಲ್ಲಿ ಯಾರೂ ಕೂಡ ಸ್ವತ: ತಾನು ಕವಿ, ವಚನಕಾರ, ಸಾಹಿತಿ ಎಂದು ಸಾರುತ್ತಿರಲಿಲ್ಲ. ಸಮಾಜದ ವೌಢ್ಯಗಳನ್ನು ಹೋಗಲಾಡಿಸಿ, ಮನುಷ್ಯರ ನಡುವೆ ಉತ್ತಮ ಸಂಬಂಧವನ್ನು ಬೆಸೆಯುವ ಉದ್ದೇಶವನ್ನು ಮಾತ್ರ ಅವರು ಹೊಂದಿದ್ದರು. ಜನರಲ್ಲಿ ಆಂತರಿಕ ಪ್ರಜ್ಞೆ ಮೂಡಿಸಲು, ತಿಳುವಳಿಕೆ ಹೇಳಲು ವಚನ ಸಾಹಿತ್ಯ ಪೂರಕವಾಗಿತ್ತು ಎಂದು ನಾಗಪ್ಪ ಗೌಡ ಹೇಳಿದರು.

ಅಂಬಿಗರ ಚೌಡಯ್ಯ ಇತರ ವಚನಗಾರರಿಗಿಂತ ತೀರಾ ಭಿನ್ನರಾಗಿದ್ದರು. ನೇರ ನಡೆನುಡಿಯ ನಿಜ ಶರಣ. ಎಲ್ಲ ವಚನಕಾರರು ತಮ್ಮ ಹೆಸರು ಮತ್ತು ಅಂಕಿತನಾಮವನ್ನು ಬೇರೆಯಾಗಿಟ್ಟುಕೊಂಡಿದ್ದರೆ ಅಂಬಿಗರ ಚೌಡಯ್ಯರ ಹೆಸರೇ ಅಂಕಿತ ನಾಮವೂ ಆಗಿದೆ. ಗುಲ್ಬರ್ಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಂಬಿಗರ ಚೌಡಯ್ಯ ಅಧ್ಯಯನ ಪೀಠವನ್ನು ಸ್ಥಾಪಿಸಲಾಗಿದೆ ಎಂದರು.

ಶಾಸಕ ಮೊಯ್ದಿನ್ ಬಾವಾ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದರು.

ಜಿಪಂ ಸಿಇಒ ಡಾ.ಎಂ.ಆರ್. ರವಿ, ದ.ಕ. ಮತ್ತು ಉಡುಪಿ ಜಿಲ್ಲೆಯ ಮೊಗವೀರ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಭರತ್ ಕುಮಾರ್ ಎರ್ಮಾಳ್, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಂಗಳೂರು ತಹಶೀಲ್ದಾರ್ ಸಿ. ಮಹಾದೇವಯ್ಯ, ರವಿ ಕುಮಾರ್, ಸಂತೋಷ್ ಮೂಲ್ಕಿ ಮತ್ತಿತರರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News