ಸಾಲ ಮರುಪಾವತಿಸಿದರೂ ಜೀವಬೆದರಿಕೆ: ದೂರು
ಮಂಗಳೂರು, ಜ. 21: ಸಾಲ ಮರುಪಾವತಿ ಮಾಡಿದ್ದರೂ ಹೆಚ್ಚಿನ ಹಣ ನೀಡುವಂತೆ ಜೀವೆದರಿಕೆ ಒಡ್ಡುತ್ತಿದ್ದ ವ್ಯಕ್ತಿಯ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಾಂಧಿನಗರದ ನಿವಾಸಿ ಪ್ರವೀಣ್ ಕೆ. ಎಂಬವರು ಜೆಪ್ಪು ಕುಡುಪಾಡಿಯ ಲತೀಶ್ ಕಿಲ್ಲೆ ಅವರಿಂದ 5 ಲಕ್ಷ ರೂ. ಸಾಲವನ್ನು ಪಡೆದುಕೊಂಡಿದ್ದರು. ಭದ್ರತೆಗಾಗಿ ತನ್ನ ಪತ್ನಿಯ ಬಂದರು ಶಾಖೆಯ ಇಂಡಿಯನ್ ಓವರ್‌ಸೀಸ್ ಬ್ಯಾಂಕಿನ ಎರಡು ಚೆಕ್‌ಗಳು ಮತ್ತು ಕೊಡಿಯಾಲ್‌ಬೈಲ್‌ನಲ್ಲಿರುವ ಐಡಿಬಿಐ ಬ್ಯಾಂಕಿನ ಎರಡು ಖಾಲಿ ಚೆಕ್‌ಗಳಿಗೆ ಸಹಿ ಹಾಕಿ ಹಣ ಮತ್ತು ದಿನಾಂಕವನ್ನು ನಮೂದಿಸದೆ ಪ್ರವೀಣ್ ಅವರು ಲತೀಶ್ ಕಿಲ್ಲೆಗೆ ನೀಡಿದ್ದರು. ಪ್ರವೀಣ್ ಕೆ. 2016ರ ಅಕ್ಟೋಬರ್ ತಿಂಗಳವರೆಗೆ ಒಟ್ಟು 11,88,000 ರೂ.ವನ್ನು ಪಾವತಿಸಿದ್ದರೂ ಚೆಕ್ ಹಾಗೂ ಠಸ್ಸೆ ಪೇಪರ್‌ಗಳನ್ನು ಹಿಂದಿರುಗಿಸದೆ ಮತ್ತೆ ಸಾಲ ಬಾಕಿ ಇದೆ. ಅದನ್ನು ಕೊಡದಿದ್ದಲ್ಲಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವಬೆದರಿಕೆ ಒಡ್ಡಿದ್ದಾನೆ ಎಂದು ಪ್ರವೀಣ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಇದೀಗ ಆರೋಪಿ ಲತೀಶ್ ಕಿಲ್ಲೆಗೆ ನೀಡಿದ್ದ 4 ಚೆಕ್‌ಗಳ ಪೈಕಿ ಎರಡು ಚೆಕ್‌ಗಳನ್ನು ಬಜಾಲ್‌ನ ಚಿದಾನಂದ ಶೆಟ್ಟಿ ಮತ್ತೆರಡು ಚೆಕ್‌ಗಳನ್ನು ಬೋಳಾರದ ತಿಮ್ಮಪ್ಪ ಶೆಟ್ಟಿ ಎಂಬವರು ತಮ್ಮ ಬ್ಯಾಂಕ್ ಖಾತೆಗೆ ನಗದೀಕರಣಕ್ಕೆ ಹಾಕಿರುತ್ತಾರೆ. ತನಗೆ ಚಿದಾನಂದ ಹಾಗೂ ತಿಮ್ಮಪ್ಪನ ಬಗ್ಗೆ ಪರಿಚಯ ಇರುವುದಿಲ್ಲ. ಅಲ್ಲದೆ, ಇವರ ಮಧ್ಯೆ ಯಾವ ವ್ಯವಹಾರವನ್ನೂ ಮಾಡಿಲ್ಲ. ಇದೀಗ ಲತೀಶ್ ಕಿಲ್ಲೆ ತನ್ನ ಇಎರಡು ಚೆಕ್‌ಗಳನ್ನು ಇತರ ಇಬ್ಬರಿಗೆ ನೀಡುವ ಮೂಲಕ ಮೂವರು ಆರೋಪಿಗಳು ಪರಸ್ಪರ ಶಾಮೀಲಾಗಿ ತನ್ನನ್ನು ವಂಚಿಸುವ ಉದ್ದೇಶವನ್ನು ಹೊಂದಿದ್ದಾರೆ ಎಂದು ಪ್ರವೀಣ್ ದೂರಿದ್ದಾರೆ.
ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.