ಎಂಆರ್‌ಪಿಎಲ್‌ಗೆ ಬಲತ್ಕಾರದ ಭೂಸ್ವಾಧೀನ ಇಲ್ಲ: ಸಚಿವ ದೇಶಪಾಂಡೆ
ಮಂಗಳೂರು, ಜ.21: ನಾಲ್ಕನೆ ಹಂತದಲ್ಲಿ ಎಂಆರ್‌ಪಿಎಲ್ ವಿಸ್ತರಣೆಗಾಗಿ ಭೂಮಿಯನ್ನು ಬಲತ್ಕಾರದಿಂದ ಸ್ವಾಧೀನಪಡಿಸುವುದಿಲ್ಲ ಎಂದು ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.
ಕದ್ರಿಯ ಮಂಜುನಾಥ ಕ್ಷೇತ್ರದಲ್ಲಿ ಶನಿವಾರ ರಜತ ದ್ವಾರ ಸಮರ್ಪಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.
ಭೂಮಿಯನ್ನು ಸ್ವಾಧೀನಪಡಿಸುವ ಪ್ರಕ್ರಿಯೆಗೆ ರೈತರಿಂದ ವಿರೋಧ ವ್ಯಕ್ತವಾಗಿರುವುದು ತನ್ನ ಗಮನಕ್ಕೆ ಬಂದಿದೆ. ಆದರೆ ಯಾವ ಕಾರಣಕ್ಕೂ ಬಲತ್ಕಾರದ ಭೂಸ್ವಾಧೀನವಿಲ್ಲ. ಏನೇ ಇದ್ದರೂ ರೈತರು, ಭೂಮಿಯ ಮಾಲಕರ ವಿಶ್ವಾಸವನ್ನು ತೆಗೆದುಕೊಳ್ಳಲಾಗುವುದು. ಅವರಿಗೆ ಯೋಗ್ಯ ಪರಿಹಾರ ನೀಡಿ ಭೂಮಿಯನ್ನು ಪಡೆಯಲು ಪ್ರಯತ್ನಿಸಲಾಗುವುದು ಎಂದು ದೇಶಪಾಂಡೆ ನುಡಿದರು.
ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ಸರಕಾರಕ್ಕಿದೆ. ರೈತರು ಮತ್ತು ಜನತೆಗೆ ಮಾರಕವಾದ ಕೈಗಾರಿಕೆಗಳ ಅನುಷ್ಠಾನಕ್ಕೆ ಸರಕಾರ ಮುಂದಾಗುವುದಿಲ್ಲ. ಎಂಆರ್‌ಪಿಎಲ್ ವಿಸ್ತರಣೆಗಾಗಿ ಕಾಯ್ದೆ ಉಲ್ಲಂಘಿಸಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿಲ್ಲ. 1996-97ರಲ್ಲಿ ಎಂಆರ್‌ಪಿಎಲ್ ಸ್ಥಾಪನೆಯ ವೇಳೆಯೂ ಪರ- ವಿರೋಧ ಕೇಳಿ ಬಂದಿದ್ದರೂ ಅನುಷ್ಠಾನಗೊಂಡಿದೆ. ದೇಶ ಮತ್ತು ರಾಜ್ಯ ಅಭಿವೃದ್ಧಿಗೆ ಕೈಗಾರಿಕೆಗಳು ಅನಿವಾರ್ಯವಾಗಿದೆ ಎಂದು ದೇಶಪಾಂಡೆ ಹೇಳಿದರು.
ಪ್ರಸ್ತುತ ವಿಸ್ತರಣೆಗಾಗಿ ಎಂಆರ್‌ಪಿಎಲ್ 25 ಸಾವಿರ ಕೋ.ರೂ. ಹೂಡಿಕೆ ಮಾಡಿದೆ. ಈ ಬಗ್ಗೆ ಭೂಸ್ವಾಧೀನಕ್ಕಾಗಿ ಕೆಐಎಡಿಬಿ ನೋಟಿಫಿಕೇಶನ್ ಮಾಡಲಾಗಿದೆ. ಜಮೀನು ಕಳೆದುಕೊಳ್ಳುವ ಸಂತ್ರಸ್ತರಿಗೆ ಕಾನೂನು ರೀತಿಯಲ್ಲಿ ಪರಿಹಾರ ನೀಡಲಾಗುವುದು. ಸ್ಥಳೀಯರಿಗೆ ಉದ್ಯೋಗ ನೀಡಲು ಪ್ರಯತ್ನುಸಲಾಗುವುದು ಎಂದು ದೇಶಪಾಂಡೆ ಹೇಳಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಪ್ರವಾಸಿ ಭಾರತ ಕಾರ್ಯಕ್ರಮ ಯಶಸ್ವಿಯಾಗಿದೆ. ಈ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಜ್ಯದಲ್ಲಿ ಬರಲಾಗಲ ತೀವ್ರಗೊಂಡಿದೆ. ಬರ ಪರಿಹಾರಕ್ಕಾಗಿ ರಾಜ್ಯ ಸರಕಾರ ಕೇಂದ್ರದಿಂದ 4,700 ಕೋ.ರೂ. ಅನುದಾನ ಕೇಳಿತ್ತು. ಆದರೆ ಕೇಂದ್ರ ಕೇವಲ 1,787 ಕೋ. ರೂ. ಮಾತ್ರ ನೀಡಿದೆ ಎಂದರು.
ರಾಜ್ಯದ 17 ವಿಶ್ವವಿದ್ಯಾಲಯಗಳಲ್ಲಿ ಅಂದಾಜು 500 ಕೋ.ರೂ. ಅವ್ಯವಹಾರ ನಡೆದಿದೆ ಎಂದು ಸಚಿವ ಬಸವರಾಜ ರಾಯರೆಡ್ಡಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ದೇಶಪಾಂಡೆ ಈ ಬಗ್ಗೆ ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳಲಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಾಗಿದೆ ಎಂದರು.
ತಮಿಳುನಾಡಿನ ಜಲ್ಲಿಕಟ್ಟುಗೆ ಸುಗ್ರಿವಾಜ್ಞೆ ಜಾರಿಗೊಳಿಸಲು ರಾಜ್ಯ ಸರಕಾರಕ್ಕೆ ಕೇಂದ್ರ ಸರಕಾರ ಅನುಮೋದ ನೀಡಿದಂತೆ ರಾಜ್ಯದ ಕಂಬಳ ಸಮಸ್ಯೆಯ ಬಗ್ಗೆಯೂ ಸುಗ್ರಿವಾಜ್ಞೆ ಜಾರಿಗೊಳಿಸಬೇಕಾದರೆ ಸೂಕ್ತ ಬೇಡಿಕೆಯನ್ನು ಸಲ್ಲಿಸುವ ಅಗತ್ಯವಿದೆ. ಆ ಬಳಿಕ ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.