‘ತುಳುನಾಡಿನ ಸ್ಥಳನಾಮಾಧ್ಯಯನ’ ಕೃತಿ ಬಿಡುಗಡೆ
ಉಡುಪಿ, ಜ. 21: ಶಿರ್ವದ ಮೂಲ್ಕಿ ಸುಂದರ್‌ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗ, ಮಂಗಳೂರು ವಿವಿ ಇತಿಹಾಸ ಅಧ್ಯಾಪಕರ ಸಂಘದ ಜಂಟಿ ಆಶ್ರಯದಲ್ಲಿ ಸಾಹಿತಿ ಡಾ.ರಘುಪತಿ ಕೆಮ್ತೂರು(ಆರ್.ಕೆ.ಮಣಿಪಾಲ) ಇವರ ‘ತುಳುನಾಡಿನ ಸ್ಥಳನಾಮಾಧ್ಯ ಯನ’ ಪುಸ್ತಕವನ್ನು ಬಡಗಬೆಟ್ಟು ಕೋ-ಆಪರೇಟಿವ್ ಸೊಸೈಟಿಯ ಮಹಾ ಪ್ರಬಂಧಕ ಜಯಕರ ಶೆಟ್ಟಿ ಇಂದ್ರಾಳಿ ಶನಿವಾರ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಬಿಡುಗಡೆಗೊಳಿಸಿದರು.
ಸಂಶೋಧಕರಿಂದ ಗತಕಾಲದ ವಿಚಾರಗಳನ್ನು ಕಾಪಾಡುವ ಕಾರ್ಯ ಇನ್ನಷ್ಟು ಆಗಬೇಕಾಗಿದೆ. ಮುಂದಿನ ಜನಾಂಗ ಓದಿ ತಿಳಿದುಕೊಳ್ಳುವ, ಸಮಾಜಕ್ಕೆ ಸಂದೇಶ ನೀಡುವ ಹಾಗೂ ಐತಿಹಾಸಿಕ ವಿಷಯಗಳ ಮೇಲೆ ಬೆಳಕು ಚೆಲ್ಲುವ ಪುಸ್ತಕಗಳು ಹೆಚ್ಚೆಚ್ಚು ಬರಬೇಕಾಗಿದೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಪುಸ್ತಕ ಪರಿಚಯ ಮಾಡಿದ ವಿಮರ್ಶಕ ಪ್ರೊ.ಮುರಲೀಧರ ಉಪಾ ಧ್ಯಾಯ ಹಿರಿಯಡಕ, 1976-80ರ ನಡುವೆ ಅಧ್ಯಯನ ನಡೆಸಿ ಮಾಹಿತಿ ಗಳನ್ನು ಸಂಗ್ರಹಿಸಿದ್ದ ಆರ್.ಕೆ.ಮಣಿಪಾಲ ಅವರ ಪಿಎಚ್‌ಡಿ ಪ್ರಬಂಧ ಕಾರಣಾಂತರಗಳಿಂದ 36 ವರ್ಷಗಳ ಬಳಿಕ ಪ್ರಕಟಗೊಂಡಿದೆ. ಅವರ ಕೃತಿಯಲ್ಲಿ ಒಳಗೊಂಡಿರುವ ಸ್ಥಳನಾಮಗಳಲ್ಲಿ ಹೆಚ್ಚಿನವು ಜಲವಾಚಕಗಳಾ ಗಿವೆ. ಪ್ರಕೃತಿಗೆ ಸಂಬಂಧಪಟ್ಟ ಹೆಸರುಗಳೇ ಇಲ್ಲಿ ಹೆಚ್ಚಾಗಿ ಬರುವುದನ್ನು ಪುರಾವೆ ಸಮೇತ ಉಲ್ಲೇಖ ಮಾಡಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಶಿರ್ವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿ.ಸುಬ್ಬಯ್ಯ ಹೆಗ್ಡೆ ವಹಿಸಿದ್ದರು.
ಲೇಖಕ ಡಾ.ರಘುಪತಿ ಕೆಮ್ತೂರು, ಇತಿಹಾಸ ಅಧ್ಯಾಪಕರ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಜಯರಾಮ್ ಶೆಟ್ಟಿಗಾರ್ ಉಪಸ್ಥಿತರಿದ್ದರು. ಶಿರ್ವ ಎಂಎಸ್‌ಆರ್‌ಎಸ್ ಕಾಲೇಜಿನ ಪುರಾತತ್ವ ವಿಭಾಗದ ಪ್ರೊ. ಟಿ. ಮುರುಗೇಶಿ ಸ್ವಾಗತಿಸಿದರು. ವಿಜಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.