×
Ad

ಬಾಲ್ಯ ವಿವಾಹ ಸಾಮಾಜಿಕ ಅನಿಷ್ಟ : ವನಿತಾ ತೊರವಿ

Update: 2017-01-22 00:00 IST

ಉಡುಪಿ, ಜ.21: ಬಾಲ್ಯ ವಿವಾಹದಿಂದ ಮಕ್ಕಳು ತಮ್ಮ ಬಾಲ್ಯ, ಶಿಕ್ಷಣ ಮತ್ತು ಸ್ವಾತಂತ್ರದಿಂದ ವಂಚಿತರಾಗುತ್ತಿದ್ದು, ಇದೊಂದು ಸಾಮಾಜಿಕ ಅನಿಷ್ಟವಾಗಿದೆ. ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯಾದ್ಯಂತ ಇಂದಿನಿಂದ 6 ತಿಂಗಳ ಕಾಲ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕು ಆಯೋಗದ ಸದಸ್ಯೆ ವನಿತಾ ತೊರವಿ ತಿಳಿಸಿದ್ದಾರೆ.

ಬಾಲ್ಯ ವಿವಾಹ ತಡೆ ಗಟ್ಟುವ ಕುರಿತ ಆಂದೋಲನದ ಅಂಗವಾಗಿ ಉಡುಪಿ ಬೋರ್ಡ್ ಹೈಸ್ಕೂಲ್ ಬಳಿ ಶನಿವಾರ ನಡೆದ ಬೃಹತ್ ಜಾಥಾವನ್ನು ಉದ್ಘಾಟಿಸಿ ಬಳಿಕ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಬಾಲ್ಯವಿವಾಹದಲ್ಲಿ ರಾಜ್ಯ ದೇಶದಲ್ಲೇ ಮೂರನೆ ಸ್ಥಾನದಲ್ಲಿರುವುದರಿಂದ, ತಕ್ಷಣಕ್ಕೆ ಈ ಬಗ್ಗೆ ತುರ್ತುಗಮನ ಹರಿಸಬೇಕಾಗಿದೆ ಎಂದರು.

ದೇಶ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯ ದಾಪುಗಾಲು ಹಾಕುತ್ತಿದ್ದರೂ, ಇಂಥ ಸಾಮಾಜಿಕ ಅನಿಷ್ಟಗಳನ್ನು ಹೊಡೆದೊಡಿಸಲು ವಿಫಲವಾಗಿದೆ. ಇವುಗಳ ಮೂಢನಂಬಿಕೆಯ ರೂಪದಲ್ಲಿ ಈಗಲೂ ಪ್ರಚಲಿತದಲ್ಲಿರುವುದು ದುರದೃಷ್ಟಕರ ಎಂದರು.

ಉಡುಪಿ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಮಾಣ ಕಡಿಮೆಯಾಗಿದೆ. ಅಲ್ಲದೇ ಜಿಲ್ಲೆಯಲ್ಲಿ 2,800 ಶಾಲೆಗಳನ್ನು ತಂಬಾಕುಮುಕ್ತಗೊಳಿಸಲು ಹಾಗೂ ಶಿಶುಸ್ನೇಹಿ ಶಾಲೆಯಾಗಿ ಮಾಡಲು ಆಂದೋಲನ ನಡೆಯುತ್ತಿರುವುದನ್ನು ಅವರು ಶ್ಲಾಘಿಸಿದರು.

ಇಂದಿನ ಶೇ.68ರಷ್ಟು ಶಾಲಾ ಮಕ್ಕಳು ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಂಥ ತಂತ್ರಜ್ಞಾನವನ್ನು ಅತಿಯಾಗಿ ಬಳಕೆ ಮಾಡುತ್ತಿದ್ದು, ಇದು ಕಲಿಕೆಯಿಂದ ಅವರ ಮನಸ್ಸನ್ನು ವಿಮುಖಗೊಳಿಸುತ್ತದೆ. ಈ ಬಗ್ಗೆ ಹೆತ್ತವರು ಜಾಗೃತಿ ವಹಿಸಬೇಕು. ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ರಾಜ್ಯಾದ್ಯಂತ ನಡೆಯಲಿದ್ದು, ಯಕ್ಷಗಾನ, ಬೀದಿ ನಾಟಕ ಮುಂತಾದವುಗಳ ಮೂಲಕ ಜನಜಾಗೃತಿ ಮೂಡಿಸಲಾಗುವುದು ಎಂದರು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ವಿವಾಹ ಎನ್ನುವ ಜವಾಬ್ದಾರಿ ಹೊರಿಸಬಾರದು ಎಂದರು.

ಡಿಎಚ್‌ಒ ಡಾ.ರೋಹಿಣಿ ಮಾತನಾಡಿ, ಬಾಲ್ಯವಿವಾಹದಿಂದ ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತಗೊಳ್ಳುವುದು ಎಂದರು. ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಡಿಡಿಪಿಐ ದಿವಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News