ಬೈಕ್‌ಗಳ ಮುಖಾಮುಖಿ ಢಿಕ್ಕಿ: ಓರ್ವ ಮೃತ್ಯು
ಉಪ್ಪಿನಂಗಡಿ, ಜ.21: ಬೈಕ್‌ಗಳೆರಡರ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನೋರ್ವ ಮೃತಪಟ್ಟು, ಮತ್ತೋರ್ವ ಬೈಕ್ ಸವಾರ ಹಾಗೂ ಪಾದಚಾರಿಯೋರ್ವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ತಡರಾತ್ರಿ ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಿಂದ ಬೈಕ್ ಸವಾರ ಯು.ಟಿ.ಮುಹಮ್ಮದ್ ಅಝೀಂ(20)ಮೃತಪಟ್ಟಿದ್ದು, ಇನೋರ್ವ ಬೈಕ್ ಸವಾರ ಶಬಾನ್ (19) ಹಾಗೂ ಪಾದಚಾರಿ ರ್ಇಾನ್ (19) ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ವಿವರ: ಮೃತ ಮುಹಮ್ಮದ್ ಅಝೀಂ 34ನೆ ನೆಕ್ಕಿಲಾಡಿ ನಿವಾಸಿ ಯು.ಟಿ. ಹಾರೂನ್ ಎಂಬವರ ಪುತ್ರನಾಗಿದ್ದಾನೆ. ಮಂಗಳೂರಿನ ಖಾಸಗಿ ವಿದ್ಯಾ ಸಂಸ್ಥೆಯೊಂದರಲ್ಲಿ ಎ.ಸಿ.ಮೆಕ್ಯಾನಿಕಲ್ ಕೋರ್ಸ್ ಕಲಿಯುತ್ತಿದ್ದ ಈತ ಶುಕ್ರವಾರ ರಾತ್ರಿ ಮನೆಗೆ ಬಂದಾತ ಗೆಳೆಯರೊಂದಿಗೆ ಒಂದಷ್ಟು ಹೊತ್ತು ಕಳೆದು ಬರುತ್ತೇನೆಂದು ಹೇಳಿ ಮನೆಯಿಂದ ಹೊರಟಿದ್ದ ಎಂದು ತಿಳಿದು ಬಂದಿದೆ.
ಗೆಳೆಯನ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಲಾರಿಯೊಂದನ್ನು ಓವರ್‌ಟೇಕ್ ಮಾಡಲೆತ್ನಿಸುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಮತ್ತೊಂದು ಬೈಕ್‌ಗೆ ಢಿಕ್ಕಿ ಹೊಡೆದಿದೆ. ನಿಯಂತ್ರಣ ಕಳೆದುಕೊಂಡ ಬೈಕ್ ಪಾದಚಾರಿಯೋರ್ವರಿಗೆ ಢಿಕ್ಕಿ ಹೊಡೆದು ರಸ್ತೆ ಬದಿಯ ಸೂಚನಾ ಲಕಕ್ಕೆ ಅಪ್ಪಳಿಸಿದೆ. ಈ ಸಂದಭರ್ ತೀವ್ರ ಗಾಯಗೊಂಡ ಮುಹಮ್ಮದ್ ಅಝೀಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಪುತ್ತೂರು ಸಂಚಾರ ಪೊಲೀಸ್ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.