ಹಳಿತಪ್ಪಿದ ರೈಲು, ಕನಿಷ್ಠ 30 ಮಂದಿ ಬಲಿ
ಭುವನೇಶ್ವರ, ಜ.22: ಜಗದಾಳಪುರ- ಭುವನೇಶ್ವರ ಹಿರಾಖಂಡ್ ಎಕ್ಸ್‌ಪ್ರೆಸ್ ರೈಲಿನ ಏಳು ಬೋಗಿಗಳು, ಆಂಧ್ರಪ್ರದೇಶದ ಕುನೇರು ವಿಭಾಗ ವ್ಯಾಪ್ತಿಯಲ್ಲಿ ಹಳಿತಪ್ಪಿ ಕನಿಷ್ಠ 30 ಮಂದಿ ಮೃತಪಟ್ಟ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಭುವನೇಶ್ವರಕ್ಕೆ ಹೋಗುತ್ತಿದ್ದ ರೈಲು (ಸಂಖ್ಯೆ 18448) ರಾತ್ರಿ 11ರ ಸುಮಾರಿಗೆ ಹಳಿತಪ್ಪಿದೆ. ಎಂಜಿನ್, ಲಗೇಜ್ ವ್ಯಾನ್, ಎರಡು ಸಾಮಾನ್ಯ ಬೋಗಿಗಳು, ಎರಡು ಸ್ಲೀಪರ್ ಕೋಚ್ ಹಾಗೂ ಒಂದು ಎಸಿ 3-ಟೈರ್ ಹಾಗೂ ಒಂದು ಎಸಿ 2-ಟೈರ್ ಕೋಚ್ ಹಳಿತಪ್ಪಿವೆ" ಎಂದು ಪೂರ್ವ ಕರಾವಳಿ ರೈಲ್ವೆ ಮುಖ್ಯ ಪಿಆರ್‌ಓ ಜೆ.ಪಿ.ಮಿಶ್ರಾ ಹೇಳಿದ್ದಾರೆ.
ಆರಂಭಿಕ ವರದಿಗಳ ಪ್ರಕಾರ ವೈದ್ಯರ ಹೇಳಿಕೆಯಂತೆ 12 ಮಂದಿಯ ಸಾವು ದೃಢಪಟ್ಟಿದೆ. ನಾಲ್ಕು ಅಪಘಾತ ಪರಿಹಾರ ವ್ಯಾನ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ.
100ಕ್ಕೂ ಹೆಚ್ಚು ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ರಾಯಗಡ ಉಪವಿಭಾಗಾಧಿಕಾರಿ ಮುರಳೀಧರ್ ಸ್ವಯೀನ್ ಹೇಳಿದ್ದಾರೆ, ಅಪಘಾತ ನಡೆದ ಸ್ಥಳ ಒಡಿಶಾದ ರಾಯಗಡದಿಂದ 24 ಕಿಲೋಮೀಟರ್ ದೂರದಲ್ಲಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗುತ್ತಿದೆ. ಸಚಿವ ಸುರೇಶ್ ಪ್ರಭು ಪರಿಹಾರ ಕಾರ್ಯಾಚರಣೆಯ ಬಗ್ಗೆ ವೈಯಕ್ತಿಕ ನಿಗಾ ವಹಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.