×
Ad

ನೋಟು ರದ್ದತಿಗಾಗಿ ನನ್ನನ್ನು ಸೋಲಿಸಬೇಡಿ ಎಂದು ಬೇಡುತ್ತಿರುವ ಪಂಜಾಬ್ ಬಿಜೆಪಿ ಸಚಿವ

Update: 2017-01-22 09:14 IST

ಅಮೃತಸರ,ಜ.22: ಅಮೃತಸರ ಉತ್ತರ ಕ್ಷೇತ್ರದಲ್ಲಿ ನೋಟುಬಂಧಿಯ ಕಾರಣದಿಂದ ಚುನಾವಣೆ ಎದುರಿಸುವುದು ಕಷ್ಟ ಎಂಬ ಕಾರಣಕ್ಕೆ ಪಂಜಾಬ್‌ನ ಬಿಜೆಪಿ ಸಚಿವರೊಬ್ಬರು, ನೋಟು ರದ್ದತಿಗಾಗಿ ನನ್ನನ್ನು ಸೋಲಿಸಬೇಡಿ ಎಂದು ಬೇಡುತ್ತಿರುವುದು ಬಹಿರಂಗವಾಗಿದೆ.

ರಾಜ್ಯದ ಸ್ಥಳೀಯ ಸಂಸ್ಥೆಗಳ ಖಾತೆ ಸಚಿವ ಅನಿಲ್ ಜೋಶಿ ಈ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದಾರೆ. ಪ್ರಚಾರದ ವೇಳೆ ನಾಗರಿಕರಲ್ಲಿ, "ನನ್ನದಲ್ಲದ ತಪ್ಪಿಗೆ ಶಿಕ್ಷೆ ನೀಡಬೇಡಿ" ಎಂದು ದೈನ್ಯದಿಂದ ಬೇಡುತ್ತಿದ್ದಾರೆ.

ಕ್ಷೇತ್ರದ ಮೆಡಿಕಲ್ ಎನ್‌ಕ್ಲೇವ್ ಬಳಿ ಮಾಡಿದ ಪ್ರಚಾರ ಭಾಷಣದಲ್ಲಿ ಜೋಶಿ, "ನನ್ನ ಅಧಿಕಾರ ಮುಗಿದಿದೆ. ಇದೀಗ ಒಂದು ತಿಂಗಳು ನಿಮ್ಮ ಅಧಿಕಾರ. ಜನರ ಬಳಿಗೆ ಹೋಗಿ ನನಗೆ ಮತ ಹಾಕುವಂತೆ ಮನವೊಲಿಸಿ. ನೋಟು ಬದಲಾದ ಬಗ್ಗೆ ಜನರಲ್ಲಿ ಕೋಪ ಇದೆ ಎಂಬ ಕೆಲವರು ಹೇಳುತ್ತಿದ್ದಾರೆ. ಇದಕ್ಕೆ ಈಗ ಏನೂ ಮಾಡುವಂತಿಲ್ಲ. ನೋಟುರದ್ದತಿಯಲ್ಲಿ ಅನಿಲ್ ಜೋಶಿ ಪಾತ್ರ ಇಲ್ಲ. ಜೋಶಿ ಸರಕಾರ ಜತೆ ಗುದ್ದಾಡಿ, ನಿಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದರು. ಆಡಳಿತಶಾಹಿಯಲ್ಲಿ ಕೆಲಸ ಮಾಡುವುದು ಸುಲಭವಲ್ಲ ಎಂದು ನೆನಪಿಡಿ" ಎಂದು ಹೇಳಿದರು.

ಈ ಬಗ್ಗೆ ಅವರಿಂದ ಪತ್ರಕರ್ತರು ವಿವರಣೆ ಕೇಳಿದಾಗ, "ನೋಟು ರದ್ದತಿಯ ಶೇಕಡ 80-90ರಷ್ಟು ಪರಿಣಾಮ ಮುಗಿದಿದೆ. ಆದರೂ ಜನರಲ್ಲಿ ಇರುವ ಅನುಮಾನದ ಹಿನ್ನೆಲೆಯಲ್ಲಿ ಹಾಗೆ ಹೇಳಿದ್ದೇನೆ" ಎಂದು ಸಮರ್ಥಿಸಿಕೊಂಡರು. ಜೋಶಿ ತಮ್ಮನ್ನು ವಿಕಾಸ ಪುರುಷ ಎಂದು ಪ್ರಚಾರದಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News