×
Ad

ಶೀಘ್ರ ಭಾರತದ ಮೂರೂ ಸೇನೆಗಳಿಗೆ ಒಂದೇ ಮುಖ್ಯಸ್ಥರ ನೇಮಕ

Update: 2017-01-22 09:20 IST

ಹೊಸದಿಲ್ಲಿ, ಜ.22: ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆ ಹೀಗೆ ಮೂರೂ ಸೇನೆಗಳಿಗೆ ಒಬ್ಬರನ್ನೇ ಮುಖ್ಯಸ್ಥರನ್ನಾಗಿ ನೇಮಕ ಮಾಡಲು ಸರಕಾರ ಚಿಂತನೆ ನಡೆಸಿದೆ.

ತರಬೇತಿ, ಲಾಜಿಸ್ಟಿಕ್ಸ್, ಯೋಜನೆ ಹಾಗೂ ಖರೀದಿ ವಿಚಾರದಲ್ಲಿ ಸಮನ್ವಯ ಸಾಧಿಸುವ ಸಲುವಾಗಿ ನಾಲ್ಕು ಸ್ಟಾರ್ ಹೊಂದಿರುವ ಜನರಲ್ ಒಬ್ಬರು ಮೂರೂ ಪಡೆಗಳ ಮುಖ್ಯಸ್ಥರಾಗಿ ಸದ್ಯದಲ್ಲೇ ನೇಮಕಗೊಳ್ಳಲಿದ್ದಾರೆ.

ಭವಿಷ್ಯದಲ್ಲಿ ಮೂರೂ ಸೇನೆಗಳ ಆಸ್ತಿಗಳನ್ನು ಕೂಡಾ ಕ್ರೋಢೀಕರಿಸಿ, ಏಕೈಕ ಕಾರ್ಯಾಚರಣೆ ಕಮಾಂಡರ್‌ಗಳನ್ನು ನೇಮಿಸುವ ಯೋಜನೆಯೂ ಪರಿಶೀಲನೆಯಲ್ಲಿದೆ. ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಮಿಲಿಟರಿ ಪಂಚ್ ನೀಡುವ ಸಲುವಾಗಿ ಈ ಬದಲಾವಣೆಗೆ ಉದ್ದೇಶಿಸಲಾಗಿದೆ.

ಡೆಹ್ರಾಡೂನ್‌ನ ಭಾರತೀಯ ಸೇನಾ ಅಕಾಡಮಿಯಲ್ಲಿ ನಡೆದ ಸಂಯುಕ್ತ ಕಮಾಂಡರ್‌ಗಳ ಸಮ್ಮೇಳನದಲ್ಲಿ ಚರ್ಚಿತವಾದ ಪ್ರಮುಖ ವಿಚಾರಗಳು. ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಕೂಡಾ ಸೇನೆಗಳ ಅತ್ಯುನ್ನತ ಅಧಿಕಾರಿಗಳ ನಡುವೆ ಇಲ್ಲಿ ವಿಚಾರ ವಿನಿಮಯ ಮಾಡಿಕೊಂಡಿದ್ದರು.

ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಧಿಕೃತವಾಗಿ ಇದನ್ನು ಘೋಷಿಸಿಲ್ಲ. ಈ ಸಮ್ಮೇಳನವನ್ನು ಸಾರ್ವಜನಿಕ ಭಾಷಣ ವೇದಿಕೆಯಾಗಿ ಬಳಸಿಕೊಳ್ಳಬಾರದು ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿತ್ತು. ಗಡಿಭಾಗದ ಸವಾಲುಗಳನ್ನು ಸಿದ್ಧಪಡಿಸಲು ಇರುವ ಸರ್ವಸನ್ನದ್ಧತೆ ಹಾಗೂ ದೀರ್ಘಕಾಲದಿಂದ ಉನ್ನತ ಮಟ್ಟದ ಸೇನಾ ಆಡಳಿತದಲ್ಲಿ ಬಾಕಿ ಇರುವ ಸುಧಾರಣೆಗಳ ಬಗೆಗಿನ ಪ್ರಸ್ತುತಿಯನ್ನು ಪ್ರಧಾನಿ ವೀಕ್ಷಿಸಿದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News