×
Ad

ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಗೆ ಆರೆಸ್ಸೆಸ್ ಮುಖಂಡನ ನೇಮಕ

Update: 2017-01-22 09:25 IST

ಹೊಸದಿಲ್ಲಿ, ಜ.22: ದೇಶದ ಪ್ರತಿಷ್ಠಿತ ಸಂಸ್ಥೆಗಳ ಉನ್ನತ ಹುದ್ದೆಗಳಿಗೆ ಆರೆಸ್ಸೆಸ್ ಸಿದ್ಧಾಂತ ಹಿನ್ನೆಲೆಯವರನ್ನೇ ನೇಮಕ ಮಾಡುವ ಚಾಳಿಯನ್ನು ಮುಂದುವರಿಸಿರುವ ಸರಕಾರ ಇದೀಗ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರೀಸರ್ಚ್ ಮುಖ್ಯಸ್ಥರಾಗಿ ಆರೆಸ್ಸೆಸ್ ಮುಖಂಡ ಆನಂದ್ ಶಂಕರ್ ಸಿಂಗ್ ಅವರನ್ನು ನೇಮಕ ಮಾಡಿದೆ.

ಆರೆಸ್ಸೆಸ್ ಸಹ ಸಂಘಟನೆಯಾದ ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನೆ (ಎಬಿಐಎಸ್‌ವೈ) ಪದಾಧಿಕಾರಿಯಾಗಿರುವ ಆನಂದ್, ಈಶ್ವರ ಶರಣ್ ಪದವಿ ಕಾಲೇಜಿನ ಪ್ರಾಚಾರ್ಯರೂ ಆಗಿದ್ದಾರೆ. ಇವರನ್ನು ಇದೀಗ ಐಸಿಎಚ್‌ಆರ್‌ಗೆ ಹೊಸ ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಯುಪಿಎ ಸರಕಾರದಿಂದ ನೇಮಕಗೊಂಡಿದ್ದ ಇತಿಹಾಸ ತಜ್ಞ ಗೋಪಿನಾಥ್ ರವೀಂದ್ರನ್ ಅವರು 2015ರ ಜೂನ್‌ನಲ್ಲಿ ರಾಜೀನಾಮೆ ನೀಡಿದ ಬಳಿಕ ಒಂದೂವರೆ ವರ್ಷದಿಂದ ಈ ಹುದ್ದೆ ಖಾಲಿ ಉಳಿದಿತ್ತು. ಐಸಿಎಚ್‌ಆರ್‌ನ ಮುಖ್ಯಸ್ಥ ವೈ.ಎಸ್.ರಾವ್ ಅವರು, ರೊಮಿಲಾ ಥಾಪರ್ ಹಾಗೂ ಇರ್ಫಾನ್ ಹಬೀಬ್ ಅವರಂಥ ಖ್ಯಾತ ಇತಿಹಾಸಗಾರರಿದ್ದ, ಐಸಿಎಚ್‌ಆರ್ ನಿಯತಕಾಲಿಕದ ಸಲಹಾ ಮಂಡಳಿಯನ್ನು ವಿಸರ್ಜಿಸಿದ್ದನ್ನು ಪ್ರತಿಭಟಿಸಿ ರವೀಂದ್ರನ್ ರಾಜೀನಾಮೆ ನೀಡಿದ್ದರು.

ಆನಂದ್ ಸಿಂಗ್ (51) ಅವರ ಹೆಸರನ್ನು ವೈ.ಎಸ್.ರಾವ್ ಅವರನ್ನೊಳಗೊಂಡ ಆಯ್ಕೆ ಸಮಿತಿ ಶಿಫಾರಸು ಮಾಡಿದ್ದು, ಇದಕ್ಕೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರೂ ಒಪ್ಪಿಗೆ ಸೂಚಿಸಿದ್ದಾರೆ. ಅಧಿಕೃತವಾಗಿ ನೇಮಕಾತಿ ಆದೇಶ ಹೊರಬೀಳಬೇಕಾಗಿದೆ.

ಸಿಂಗ್ ಅವರು ಎಬಿಐಎಸ್‌ವೈ ಉತ್ತರ ಪ್ರದೇಶ ಘಟಕದ ಉಪಾಧ್ಯಕ್ಷ ರಾಘಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News