ಕಾಣೆಯಾದ ಜೆಎನ್‌ಯು ವಿದ್ಯಾರ್ಥಿ ನಜೀಬ್ ಕುಟುಂಬಕ್ಕೆ 20 ಲಕ್ಷ ರೂ. ಬೇಡಿಕೆಯ ಕರೆ
ಹೊಸದಿಲ್ಲಿ, ಜ.22: ಮೂರು ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ನಜೀಬ್ ಅಹ್ಮದ್‌ರ ಕುಟುಂಬಕ್ಕೆ ನಜೀಬ್ ಬಿಡುಗಡೆ ಮಾಡಬೇಕಾದರೆ 20 ಲಕ್ಷ ರೂ. ನೀಡಬೇಕೆಂದು ಬೇಡಿಕೆಯ ಕರೆ ಮಾಡಿರುವ ಸಂಗತಿ ಶನಿವಾರ ಬಹಿರಂಗವಾಗಿದೆ.
ಕೆಲವು ದಿನವ ಹಿಂದೆಯೇ ಮಾಡಲಾಗಿದ್ದ ಫೋನ್ ಕರೆಯನ್ನು ಪತ್ತೆ ಹಚ್ಚಿರುವ ದಿಲ್ಲಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಉತ್ತರಪ್ರದೇಶ ಮಹಾರಾಜ್‌ಗಂಜ್‌ನಿಂದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಅದೇ ದಿನ ಆರೋಪಿಯನ್ನು ದಿಲ್ಲಿಗೆ ಕರೆತರಲಾಗಿದೆ. ತೀವ್ರ ವಿಚಾರಣೆಗೂ ಗುರಿಪಡಿಸಲಾಗಿದೆ. ಆರೋಪಿಯನ್ನು ಶಮೀಮ್ ಅಲಿಯಾಸ್ ಶಿವಕುಮಾರ್ ಎಂದು ಗುರುತಿಸಲಾಗಿದೆ. ಆತ ಕ್ರಿಮಿನಲ್ ಹಿನ್ನೆಲೆ ಉಳ್ಳವನಾಗಿದ್ದ. ಆದರೆ, ಆತನೇ ನಜೀಬ್‌ರನ್ನು ಅಪಹರಣ ಮಾಡಿದ್ದಾನೆಯೇ ಎಂಬ ಬಗ್ಗೆ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಆರಂಭದಲ್ಲಿ ಶಮೀಮ್ ತನಗೂ ಬೇಡಿಕೆಯ ಕರೆಗೂ ಸಂಬಂಧವಿಲ್ಲ ಎಂದು ಹೇಳಿದ್ದ. ತಾನು ಕೇವಲ ಕುಚೇಷ್ಟೆಗಾಗಿ ವಿದ್ಯಾರ್ಥಿಯ ಕುಟುಂಬದವರಿಗೆ ಫೋನ್ ಮಾಡಿದ್ದೆ ಎಂದು ಕೊನೆಗೂ ತಪ್ಪೊಪ್ಪಿಕೊಂಡಿದ್ದ. ಶಮೀಮ್‌ರನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು, ಇನ್ನೂ ಯಾವುದೇ ಖಚಿತ ನಿರ್ಧಾರಕ್ಕೆ ಬಂದಿಲ್ಲ ಎಂದು ಜೆಸಿಪಿ(ಕ್ರೈಮ್) ರವೀಂದ್ರ ಯಾದವ್ ಹೇಳಿದ್ದಾರೆ.
ಕಾಣೆಯಾಗಿರುವ ವಿದ್ಯಾರ್ಥಿ ನಜೀಬ್ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಅ.14ರಂದು ಎಬಿವಿಪಿ ವಿದ್ಯಾರ್ಥಿಗಳು ಅವರೊಂದಿಗೆ ಘರ್ಷಣೆ ನಡೆಸಿದ್ದರು. ಗಲಾಟೆ ನಡೆದ ಬಗ್ಗೆ ಮಾಹಿತಿ ಪಡೆದ ನಜೀಬ್ ತಾಯಿ ಮರುದಿನ ದಿಲ್ಲಿಗೆ ಆಗಮಿಸಿ ಯುನಿವರ್ಸಿಟಿ ತಲುಪುವಷ್ಟರಲ್ಲಿ ನಜೀಬ್ ನಾಪತ್ತೆಯಾಗಿದ್ದರು.