ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆರಂಭ...ಪ್ರತಿಭಟನೆ ಮುಂದುವರಿಕೆ
ಚೆನ್ನೈ, ಜ.23: ಜಾನಪದ ಕ್ರೀಡೆ ಜಲ್ಲಿಕಟ್ಟು ಆಚರಣೆಗೆ ರಾಜ್ಯಪಾಲರು ಸುಗ್ರೀವಾಜ್ಞೆ ಹೊರಡಿಸಿದ ಹಿನ್ನೆಲೆಯಲ್ಲಿ ಸುಮಾರು ಮೂರು ವರ್ಷಗಳ ಬಳಿಕ ತಮಿಳುನಾಡಿನಲ್ಲಿ ರವಿವಾರ ಆರಂಭವಾಗಿದೆ. ಆದರೆ, ಮತ್ತೊಂದೆಡೆ, ಜಲ್ಲಿಕಟ್ಟು ಆಚರಣೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ಮುಂದುವರಿದಿದೆ.
ಶಾಶ್ವತ ಪರಿಹಾರ ಸಿಗುವ ತನಕ ಜಲ್ಲಿಕಟ್ಟು ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಮಧುರೈನ ಅಲಂಗನಲ್ಲೂರ್‌ನಲ್ಲಿ ಧರಣಿ ನಡೆಸಲಾಗುತ್ತಿದೆ.
ತಮಿಳುನಾಡು ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಬೆಳಗ್ಗೆ ಮಧುರೈಗೆ ಆಗಮಿಸಿದ್ದು, ಜಲ್ಲಿಕಟ್ಟು ಕ್ರೀಡೆಗೆ ಚಾಲನೆ ನೀಡಿದ್ದಾರೆ.
2014ರಲ್ಲಿ ಸುಪ್ರೀಂಕೋರ್ಟ್ ಜಲ್ಲಿಕಟ್ಟು ಆಚರಣೆಗೆ ನಿಷೇಧ ಹೇರಿತ್ತು. ಈ ಬಾರಿ ಜಲ್ಲಿಕಟ್ಟು ಆಚರಣೆಗೆ ಅವಕಾಶ ನೀಡಲೇಬೇಕೆಂದು ತಮಿಳುನಾಡಿನ ಜನತೆ ಭಾರೀ ಪ್ರತಿಭಟನೆ ನಡೆಸಿದ್ದರು. ಜಲ್ಲಿಕಟ್ಟು ಪಟ್ಟಿಗೆ ಮಣಿದ ಕೇಂದ್ರ ಸರಕಾರ ಶುಕ್ರವಾರ ಸಂಜೆ ತಮಿಳುನಾಡು ಸರಕಾರಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಸೂಚನೆ ನೀಡಿತ್ತು.