ಸೇನಾ ವಾಹನದ ಮೇಲೆ ದಾಳಿ:ಇಬ್ಬರು ಯೋಧರ ಸಾವು

Update: 2017-01-22 08:15 GMT

ಗುವಾಹಟಿ,ಜ.22: ಅಸ್ಸಾಂ-ಅರುಣಾಚಲ ಪ್ರದೇಶ ಗಡಿಯ ಬಳಿ ಪ್ರವಾಸಿಗಳಿಗೆ ಬೆಂಗಾವಲಾಗಿ ಸಾಗುತ್ತಿದ್ದ ಅಸ್ಸಾಂ ರೈಫಲ್ಸ್‌ನ ವಾಹನದ ಮೇಲೆ ಶಂಕಿತ ಉಗ್ರರು ನಡೆಸಿರುವ ದಾಳಿಯಲ್ಲಿ ಇಬ್ಬರು ಯೋಧರು ಮೃತಪಟ್ಟಿದ್ದು, ಇತರ ಹಲವರು ಗಾಯಗೊಂಡಿದ್ದಾರೆ.

ಅಸ್ಸಾಮಿನ ತಿನ್ಸುಕಿಯಾ ಜಿಲ್ಲೆಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ 53ರಲ್ಲಿ ಜಗನ್ 12ನೇ ಮೈಲಿಕಲ್ಲು ಬಾರಾಬಸ್ತಿ ಎಂಬಲ್ಲಿ ಈ ದಾಳಿ ನಡೆದಿದ್ದು, ಉಗ್ರರು ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಹಲವಾರು ಗ್ರೆನೇಡ್‌ಗಳನ್ನು ಎಸೆದಿದ್ದರು. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದು, ಭೀಷಣ ಗುಂಡಿನ ಕಾಳಗ ಮುಂದುವರಿದಿದೆ ಎಂದು ರಕ್ಷಣಾ ವಕ್ತಾರರೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ಈ ಪ್ರದೇಶದಲ್ಲಿಯ ಭಾರತ-ಮ್ಯಾನ್ಮಾರ್ ಗಡಿಯ ಬಳಿ ನಡೆಯುತ್ತಿರುವ ಪಂಗ್‌ಸಾವು ಉತ್ಸವದಿಂದ ಮರಳುತ್ತಿದ್ದ ಪ್ರವಾಸಿಗಳಿದ್ದ ಮೂರು ವಾಹನಗಳು ಮತ್ತು ಸೇನಾವಾಹನ ದಾಳಿಯಿಂದ ಹಾನಿಗೀಡಾಗಿವೆ.

 ಇಡೀ ಪ್ರದೇಶದಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಕೂಂಬಿಂಗ್ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ತನ್ಮಧ್ಯೆ ಪ್ರವಾಸಿಗಳು ದಾರಿಮಧ್ಯೆಯೇ ಸಿಕ್ಕಿಹಾಕಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News