×
Ad

ಟ್ರಂಪ್ ಕಾರ್ಯಕ್ರಮದಲ್ಲೇ ಕುರ್ ಆನ್ ಆಧರಿತ ರಾಜಕೀಯ ಸಂದೇಶ ನೀಡಿದ ಇಮಾಮ್ ಮೊಹಮ್ಮದ್ ಮಜೀದ್

Update: 2017-01-22 17:36 IST

ವಾಷಿಂಗ್ಟನ್,ಜ.22: ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಏರ್ಪಡಿಸಲಾಗಿದ್ದ ಅಂತರ್‌ಧರ್ಮೀಯ ಪ್ರಾರ್ಥನಾ ಸಭೆಯಲ್ಲಿ ನಮಾಝ್‌ಗೆ ಕರೆ ‘ಆಝಾನ್’ ನೀಡುತ್ತಾರೆಂದು ನಿರೀಕ್ಷಿಸಲಾಗಿದ್ದ ಇಮಾಮ್ ಮೊಹಮ್ಮದ್ ಮಜೀದ್ ಅವರು ಅದರ ಬದಲು ನೂತನ ಅಧ್ಯಕ್ಷರು ಮತ್ತು ಅವರ ಆಡಳಿತಕ್ಕೆ ಸ್ಪಷ್ಟ ರಾಜಕೀಯ ಸಂದೇಶಗಳನ್ನೊಳಗೊಂಡ ಕುರ್‌ಆನ್‌ನ ಎರಡು ಶ್ಲೋಕಗಳನ್ನು ಪಠಿಸಿದ್ದರು.

ಆಲ್ ಡಲ್ಲಸ್ ಏರಿಯಾ ಮುಸ್ಲಿಮ್ ಸೊಸೈಟಿಯ ಕಾರ್ಯಕಾರಿ ನಿರ್ದೇಶಕರಾಗಿರುವ ಮಜೀದ್ ವಾಷಿಂಗ್ಟನ್‌ನಲ್ಲಿ ಪ್ರಸಿದ್ಧ ವ್ಯಕ್ತಿಯಾಗಿದ್ದಾರೆ. ಆದರೆ ಶನಿವಾರ ಸಂಜೆ ವಾಷಿಂಗ್ಟನ್ ನ್ಯಾಷನಲ್ ಕೆಥೆಡ್ರಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಒಪ್ಪಿಕೊಂಡಿದ್ದಕ್ಕಾಗಿ  ಮುಸ್ಲಿಮ್ ಬಾಂಧವರಿಂದಲೇ ಟೀಕೆಗೆ ಗುರಿಯಾಗಿದ್ದರು.

ಪ್ರಾರ್ಥನೆಯನ್ನು ನಡೆಸಲು ಆಹ್ವಾನಿತರಾಗಿದ್ದ ವಿವಿಧ ಧಾರ್ಮಿಕ ನಾಯಕರಲ್ಲಿ ಮಜೀದ್ ಕೂಡ ಒಬ್ಬರಾಗಿದ್ದರು. ಜಾರ್ಜ್ ವಾಷಿಂಗ್ಟನ್ ಅವರ ಕಾಲದಿಂದಲೇ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಕಾರ್ಯಕ್ರಮದ ಸೂಚಿಯಲ್ಲಿ ಮಜೀದ್ ಅವರು ‘ಆಝಾನ್ ’ (ನಮಾಝಿಗೆ ಕರೆ) ನೀಡಲಿದ್ದಾರೆ ಎಂದು ಹೇಳಲಾಗಿತ್ತು. 

ಆದರೆ ಹೆಚ್ಚಿನ ಅಮೆರಿಕನ್‌ ಮುಸ್ಲಿಮರನ್ನು ಕಡೆಗಣಿಸಲಾಗಿರುವ ಮತ್ತು ಅವರ ಬಗ್ಗೆ ತಪ್ಪುನಂಬಿಕೆಗಳು ಮೂಡಿರುವ,ಜನಾಂಗೀಯ ಮತ್ತು ಧಾರ್ಮಿಕ ಕಂದರ ಸೃಷ್ಟಿಯಾಗಿರುವ ಈ ಸಂದರ್ಭದಲ್ಲಿ ಸ್ಪಷ್ಟ ರಾಜಕೀಯ ಸೂಚ್ಯರ್ಥಗಳನ್ನು ಹೊಂದಿರುವ,ಕುರ್ ಆನ್‌ನ ಎರಡು ಶ್ಲೋಕಗಳನ್ನು ಪಠಿಸಲು ಮಜೀದ್ ಆಯ್ಕೆ ಮಾಡಿಕೊಂಡಿದ್ದರು.

ಮಜೀದ್ ಅವರು ಟ್ರಂಪ್ ಅವರ ಕುಟುಂಬ ಮತ್ತು ಉಪಾಧ್ಯಕ್ಷ ಮೈಕೇಲ್ ಪೆನ್ಸ್ ಸೇರಿದಂತೆ ಅಧಿಕಾರಸ್ಥರನ್ನುದ್ದೇಶಿಸಿ ಕುರ್ ಆನ್‌ನ ಎರಡು ಶ್ಲೋಕಗಳನ್ನು ಮೊದಲು ಅರೆಬಿಕ್‌ನಲ್ಲಿ ಓದಿ,ಬಳಿಕ ಇಂಗ್ಲಿಷ್‌ನಲ್ಲಿ ಅದರ ಅನುವಾದವನ್ನು ನೀಡಿದರು.

ಅವರು ಓದಿದ್ದ ಮೊದಲ ಶ್ಲೋಕ ಸೂರ ಅಲ್ ಹುಜುರಾತ್ ಅಧ್ಯಾಯದ್ದಾಗಿತ್ತು.

‘‘ಮಾನವರೇ, ಖಂಡಿತವಾಗಿಯೂ ನಾವು ನಿಮ್ಮೆಲ್ಲರನ್ನೂ ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಸೃಷ್ಟಿಸಿರುವೆವು. ತರುವಾಯ ನೀವು ಪರಸ್ಪರ ಗುರುತಿಸುವಂತಾಗಲು ನಿಮ್ಮನ್ನು (ವಿವಿಧ) ಜನಾಂಗಗಳಾಗಿ ಮತ್ತು ಪಂಗಡಗಳಾಗಿ ರೂಪಿಸಿರುವೆವು. ಅಲ್ಲಾಹನ ದೃಷ್ಟಿಯಲ್ಲಿ ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನಾಗಿರುವವನೇ ನಿಮ್ಮಲ್ಲಿನ ಅತ್ಯುತ್ತಮನಾಗಿದ್ದಾನೆ. ಅಲ್ಲಾಹನು ಖಂಡಿತವಾಗಿಯೂ ಬಲ್ಲವನು ಮತ್ತು ಅರಿವು ಉಳ್ಳವನಾಗಿದ್ದಾನೆ ’’

ಅವರು ಓದಿದ್ದ ಎರಡನೇ ಶ್ಲೋಕ ಸೂರ ಅರ್ರೂಮ್ ಅಧ್ಯಾಯದ್ದಾಗಿತ್ತು.

‘‘ಆಕಾಶ ಹಾಗೂ ಭೂಮಿಯ ಸೃಷ್ಟಿ ಮತ್ತು ನಿಮ್ಮ ಭಾಷೆಗಳು ಮತ್ತು ಬಣ್ಣಗಳಲ್ಲಿರುವ ವ್ಯತ್ಯಾಸಗಳು ಅವನ(ಅಲ್ಲಾಹನ) ಸಂಕೇತಗಳ ಸಾಲಿಗೆ ಸೇರಿವೆ. ಜ್ಞಾನ ಉಳ್ಳವರಿಗೆ ಇದರಲ್ಲಿ ಖಂಡಿತ ಸೂಚನೆಗಳಿವೆ ’’

ವಾಷಿಂಗ್ಟನ್ ನ್ಯಾಷನಲ್ ಕೆಥೆಡ್ರಲ್‌ನ ಅಧಿಕಾರಿಗಳು ಮಜೀದ್‌ರ ಶ್ಲೋಕ ಪಠಣಕ್ಕೆ ಅನುಮತಿ ನೀಡಿದ್ದರು ಎಂದು ಅವರ ವಕ್ತಾರರು ತಿಳಿಸಿದರು.

ಚುನಾವಣೆಯ ಬಳಿಕ ಮುಸ್ಲಿಮರ ಬಗ್ಗೆ ಬಹಳಷ್ಟನ್ನು ಹೇಳಲಾಗಿದೆ ಮತ್ತು ಮುಸ್ಲಿಮರ ನಿಷ್ಠೆಯ ಬಗ್ಗೆಯೂ ಪ್ರಶ್ನೆಗಳೆದ್ದಿದ್ದವು. ದೇವರೇ ನಮ್ಮೆಲ್ಲರನ್ನು ಸೃಷ್ಟಿಸಿದ್ದಾನೆ,ನಾವು ಒಂದಾಗಬೇಕು ಮತ್ತು ಈ ವೈವಿಧ್ಯತೆಯನ್ನು ಗೌರವಿಸಬೇಕು ಎಂಬ ಸಂದೇಶ ರವಾನೆ ಈ ಶ್ಲೋಕಗಳ ಉದ್ದೇಶವಾಗಿದೆ ಎಂದು ಆಲ್ ಡಲ್ಲಸ್ ಏರಿಯಾ ಮುಸ್ಲಿಮ್ ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷ ರಿಝ್ವಾನ್ ಜಕಾ ಹೇಳಿದರು.

ತನ್ನ ಪ್ರಚಾರ ಅಭಿಯಾನದಲ್ಲಿ ಮುಸ್ಲಿಮರು, ಮೆಕ್ಸಿಕನ್ನರು ಮತ್ತು ಮಹಿಳೆಯರ ವಿರುದ್ಧ ಒರಟು ಭಾಷೆಯನ್ನು ಬಳಸಿದ್ದ ಟ್ರಂಪ್ ಅವರನ್ನು ಆಧರಿಸಿ,ಅವರೊಂದಿಗೆ ಪ್ರಾರ್ಥಿಸಿದ್ದಕ್ಕಾಗಿ ಎಪಿಸ್ಕೋಪಲಿಯನ್ ಕ್ರೈಸ್ತರ ವಿರುದ್ಧವೂ ಟೀಕೆಗಳು ವ್ಯಕ್ತವಾಗಿದ್ದವು.

 ಕೆಥೆಡ್ರಲ್‌ನ ಡೀನ್ ರೆವರಂಡ್ ಮಾರ್ಷಲ್ ಹೊಲೆರಿತ್ ಅವರೂ ‘ನಮ್ಮನ್ನು ಪ್ರತ್ಯೇಕಿಸಿರುವ ಗೋಡೆಗಳನ್ನು ಬೀಳಿಸುವಂತೆ ಮತ್ತು ನಮ್ಮ ಹೃದಯಗಳಲ್ಲಿ ತುಂಬಿಕೊಂಡಿರುವ ಅಹಂಕಾರ ಮತ್ತು ದ್ವೇಷವನ್ನು ನಿವಾರಿಸುವಂತೆ ದೇವರನ್ನು ಕೋರುವ,ದೇಶದಲ್ಲಿಯ ವಿಭಜಿತ ರಾಜಕೀಯ ವಾತಾವರಣವನ್ನು ಬೆಟ್ಟು ಮಾಡುವ ಪ್ರಾರ್ಥನೆಯನ್ನು ಆಯ್ಕೆ ಮಾಡಿಕೊಂಡಿದ್ದರು.

ಮಜೀದ್ ಅವರು ಹಲವಾರು ವರ್ಷಗಳಿಂದ ವಾಷಿಂಗ್ಟನ್‌ನಲ್ಲಿ ನಡೆಯುವ ಅಂತರ್‌ಧರ್ಮೀಯ ಮತ್ತು ಸರಕಾರಿ ಕಾರ್ಯಕ್ರಮಗಳಲ್ಲಿ ಚಿರಪರಿಚಿತ ವ್ಯಕ್ತಿಯಾಗಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News