ಆಟೊ ಚಾಲಕರ ಸೇವೆ ಪರಿಗಣನೆ: ಆಸ್ಕರ್
ಮಂಗಳೂರು, ಜ.22: ಅಪಘಾತದ ಸಂದರ್ಭದಲ್ಲಿ ತುರ್ತು ಸಹಾಯವನ್ನು ನೀಡಿ ಜನರ ಜೀವ ರಕ್ಷಣೆ ಮಾಡಿದ ಆಟೋ ಚಾಲಕರ ಸೇವೆಯನ್ನು ಪರಿಗಣಿಸಿ ಅವರಿಗೆ ಗುರುತು ಪತ್ರ ನೀಡುವ ಬಗ್ಗೆ ಕಾರ್ಮಿಕ ಸಚಿವಾಲಯದಲ್ಲಿ ಸಮಾಲೋಚನೆ ನಡೆಸುವುದಾಗಿ ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ ನಗರದ ಮೌಲಾನ ಆಝಾದ್ ಅಲ್ಪಸಂಖ್ಯಾತರ ಭವನದ ಸಭಾಂಗಣದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಸ್ವಾವಲಂಬನಾ ಯೋಜನೆಯಡಿಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಸುಮಾರು 40 ಮಂದಿ ಆಟೊ ಚಾಲಕರಿಗೆ ಆಟೋ ರಿಕ್ಷಾ ಖರೀದಿಗಾಗಿ 11.26 ಲಕ್ಷ ರೂ.ಗಳ ಸಾಲ ಮತ್ತು ಸಹಾಯಧನದ ಚೆಕ್‌ಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ಆಟೊ ಚಾಲಕರು ಹಾಗೂ ಟ್ಯಾಕ್ಸಿ ಚಾಲಕರು ರಸ್ತೆ ಅಪಘಾತಕ್ಕೊಳಗಾಗಿ ರಸ್ತೆಯಲ್ಲಿ ಬಿದ್ದಿರುವ ಗಾಯಾಳುಗಳಿಗೆ ಆಸ್ಪತ್ರೆಗಳಿಗೆ ಕೊಂಡೊಯ್ಯುವ ಮೂಲಕ ಅವರಿಗೆ ಸಕಾಲದಲ್ಲಿ ಚಿಕಿತ್ಸೆ ಲಭಿಸುವಂತೆ ಮಾಡಿ ಅವರ ಜೀವ ರಕ್ಷಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸೇವಾ ಮನೋಭಾವವನ್ನು ಗುರುತಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಶಾಸಕ ಜೆ.ಆರ್.ಲೋಬೊ ಮಾತನಾಡಿ, ಅಲ್ಪಸಂಖ್ಯಾತರ ನಿಗಮದಿಂದ ಸಾಲ ಮತ್ತು ಸಹಾಯ ಧನದ ಸೌಲಭ್ಯ ಪಡೆದಿರುವ ಆಟೊ ಚಾಲಕರು ಪ್ರಸ್ತುತ ಯೋಜನೆಯ ಸದುಪಯೋಗವನ್ನು ಪಡೆದುಕೊಂಡರೆ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ದ.ಕ. ಜಿಲ್ಲಾ ವ್ಯವಸ್ಥಾಪಕ ಸಫ್ವಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.