ವಾರದ ಮಜೂರಿಯನ್ನು ನಗದಾಗಿ ಪಾವತಿಸಲು ಆಗ್ರಹಿಸಿ ಜ.24 ರಂದು ಬೀಡಿ ಕಾರ್ಮಿಕರ ಚಳವಳಿ

Update: 2017-01-22 13:28 GMT

ಮಂಗಳೂರು ,  ಜ.22. ಕೇಂದ್ರ ಸರಕಾರವು 500 ಮತ್ತು 1000 ಮೌಲ್ಯದ ನೋಟುಗಳನ್ನು ರದ್ದುಗೊಳಿಸಿದ ನಂತರ ಜಿಲ್ಲೆಯಲ್ಲಿ ಬೀಡಿ ಕಾರ್ಮಿಕರ ಪರಿಸ್ಥಿತಿ ಚಿಂತಾಜನಕವಾಗಿದೆ. ಪೂರ್ವ ತಯಾರಿ ಇಲ್ಲದೇ ತರಾತುರಿಯಲ್ಲಿ ಈ ತೀರ್ಮಾನ ಕೈಗೊಂಡ ಕಾರಣ ಸಾಕಷ್ಟು ಹಣದ ಲಭ್ಯತೆಯ ಕೊರತೆಯಿಂದ ಕಾರ್ಮಿಕರಿಗೆ ವಾರದ ಮಜೂರಿ ಪಾವತಿಯಲ್ಲಿ ವ್ಯತ್ಯಾಸವಾಗಿದೆ. ಇದೀಗ ಸರಕಾರ ನಗದು ರಹಿತ ವ್ಯವಹಾರಕ್ಕೆ ಒತ್ತು ನೀಡಿರುವುದರಿಂದ ಕಾರ್ಮಿಕರ ಮಜೂರಿ ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕೆಂಬ ನಿಯಮವನ್ನು ಹೇರಲು ಪ್ರಯತ್ನಿಸುತ್ತಿರುವುದರಿಂದ ವಾರದ ಮಜೂರಿಯಲ್ಲಿ ತನ್ನ ದೈನಂದಿನ ಅಗತ್ಯಗಳನ್ನು ಪೂರೈಸುವ ಬೀಡಿ ಕಾರ್ಮಿಕರಿಗೆ ಕಷ್ಟವಾಗಿದೆ. ಬೀಡಿ ಕೈಗಾರಿಕೆಗೆ ನಗದು ರಹಿತ ವ್ಯವಹಾರದಿಂದ ವಿನಾಯಿತಿ ನೀಡಿ ಎಂದಿನಂತೆಯೇ ನಗದಾಗಿ ಅವರ ಮಜೂರಿಯನ್ನು ಪಾವತಿಸಬೇಕೆಂದು ಒತ್ತಾಯಿಸಲು ಜ.24 ರಂದು ಮಂಗಳೂರು ದ.ಕ.ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ಪುರಭವನದ ಹಿಂಭಾಗ ಒಟ್ಟು ಸೇರಿ ನಂತರ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನಾ ಪ್ರದರ್ಶನದ ನೇತೃತ್ವವನ್ನು ಕಾರ್ಮಿಕ ಸಂಘಟನೆಗಳಾದ ಎಐಟಿಯುಸಿ, ಎಚ್. ಎಂ. ಎಸ್., ಸಿಐಟಿಯು ಹಾಗೂ ದ.ಕ ಜಿಲ್ಲಾ ಬೀಡಿ ಕಂಟ್ರಾಕ್ಟುದಾರರ ಹೋರಾಟ ಸಮಿತಿ ವಹಿಸಲಿದೆ ಎಂದು ಎಐಟಿಯುಸಿಯ ಕಾರ್ಯದರ್ಶಿ ವಿ.ಎಸ್.ಬೇರಿಂಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News