ಪತ್ರಿಕಾ ರಂಗಕ್ಕೆ ಸ್ವಯಂ ನೀತಿ ಸಂಹಿತೆ ಅಗತ್ಯ : ಎ.ಈಶ್ವರಯ್ಯ
ಉಡುಪಿ, ಜ.22: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ರಂಗಕ್ಕೆ ನಿರ್ದಿಷ್ಟವಾದ ಕಾರ್ಯಸೂಚಿ ಹಾಗೂ ನಿಯಂತ್ರಣ ಇಲ್ಲದಿದ್ದರೂ ಸ್ವಯಂ ನೀತಿ ಸಂಹಿತೆಯನ್ನು ರೂಪಿಸಿಕೊಳ್ಳಬೇಕಾಗಿದೆ ಎಂದು ಹಿರಿಯ ಪತ್ರಕರ್ತ ಹಾಗೂ ವಿಮರ್ಶಕ ಎ.ಈಶ್ವರಯ್ಯ ಹೇಳಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿಯು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ರವಿವಾರ ಉಡುಪಿ ಐಎಂಎ ಭವನದಲ್ಲಿ ಆಯೋಜಿಸಿದ ಪತ್ರಕರ್ತರಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪತ್ರಿಕಾ ರಂಗವನ್ನು ಕಾರ್ಯಾಂಗ, ನ್ಯಾಯಾಂಗ ನಿಯಂತ್ರಣ ಮಾಡುವ ಬದಲು ತನ್ನಷ್ಟಕ್ಕೇ ತಾನೇ ಸುಧಾರಿಸಿಕೊಂಡು ಹೋಗಬೇಕು. ಪತ್ರಕರ್ತರು ಆಯಾ ಕಾಲ ಹಾಗೂ ಸನ್ನಿವೇಶಕ್ಕೆ ತಕ್ಕ ರೀತಿಯಲ್ಲಿ ಹೊಂದಿಕೊಂಡು ಹೋಗಬೇಕು. ಪತ್ರಕರ್ತರಲ್ಲಿ ಭಾಷೆಯ ಮೇಲೆ ಪ್ರಬುದ್ಧತೆ ಅಗತ್ಯ. ಬರೆಯುವ ಸುದ್ದಿಗಳಲ್ಲಿ ನಿಖರತೆ ಮತ್ತು ಸ್ಪಷ್ಟತೆ ಇರಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಮಾಧ್ಯಮ ಅಕಾಡೆಮಿ ಸದಸ್ಯ ಮುತ್ತು ನಾಯ್ಕ ವಹಿಸಿದ್ದರು. ಅಕಾಡೆಮಿಯ ಕಾರ್ಯದರ್ಶಿ ಎಸ್.ಶಂಕರಪ್ಪ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಕೆ.ರೋಹಿಣಿ, ಪತ್ರಕರ್ತ ಹೃಷಿಕೇಶ್ ಬಹದ್ದೂರ್ ದೇಸಾಯಿ, ಆಸ್ಟ್ರೋ ಮೋಹನ್, ಸಂಘದ ಅಧ್ಯಕ್ಷ ಜಯಕರ ಸುವರ್ಣ, ಉಪಾಧ್ಯಕ್ಷ ಹರೀಶ್ ಹೆಜಮಾಡಿ ಉಪಸ್ಥಿತರಿದ್ದರು.
ಬಳಿಕ ವಿಜಯ ಕರ್ನಾಟಕ ಕಲ್ಬುರ್ಗಿ ಸ್ಥಾನೀಯ ಸಂಪಾದಕ ದೇವು ಪತ್ತಾರ್ ‘ಸಮಕಾಲೀನ ತಲ್ಲಣಗಳು ಮತ್ತು ಪತ್ರಿಕೋದ್ಯಮ’, ಕನ್ನಡಪ್ರಭ ಸಹಾಯಕ ಸಂಪಾದಕ ವಿನೋದ್ ಕುಮಾರ್ ಬಿ.ನಾಯಕ್ ‘ಪತ್ರಿಕಾ ಕಾನೂನು ಮತ್ತು ನೀತಿ ಸಂಹಿತೆ’, ದಿ ಹಿಂದು ಬೀದರ್ ಜಿಲ್ಲಾ ಹಿರಿಯ ವರದಿಗಾರ ಹೃಷಿಕೇಶ್ ಬಹದ್ದೂರ್ ದೇಸಾಯಿ ‘ಸಾಮಾಜಿಕ ಜಾಲತಾಣಗಳು’, ಮೈಸೂರು ಮಹಾರಾಜ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಅಧ್ಯಾಪಕ ಲೋಕೇಶ್ ಮೊಸಳೆ ‘ಛಾಯಾಚಿತ್ರ ಪತ್ರಿಕೋದ್ಯಮ’ ಕುರಿತು ವಿಷಯ ಮಂಡಿಸಿದರು.
ಪತ್ರಕರ್ತರಿಂದ ಹುಲಿವೇಷ ಕುಣಿತ
ಕಾರ್ಯಾಗಾರದ ಎರಡನೆ ದಿನವಾದ ಇಂದು ನಡೆದ ಸಾಂಸ್ಕೃತಿಕ ಕಾರ್ಯ ಕ್ರಮದಲ್ಲಿ ಉಡುಪಿಯ ಪತ್ರಕರ್ತರ ಜನಪದ ಹುಲಿವೇಷ ಕುಣಿತವು ಆಕರ್ಷಣೀಯವಾಗಿತ್ತು.
ಮಾರ್ಪಳ್ಳಿ ಚಂಡೆ ಬಳಗದ ಸುಬ್ರಹ್ಮಣ್ಯ ಉಪಾಧ್ಯ ಮಾರ್ಪಳ್ಳಿ ಅವರ ನಿರ್ದೇಶನದಲ್ಲಿ ಎಂಟು ಮಂದಿ ಹುಲಿವೇಷಧಾರಿ ಪತ್ರಕರ್ತರು ಹೆಜ್ಜೆ ಹಾಕಿ ಕುಣಿದರು. ಅಲ್ಲದೆ ಮಣಿಪಾಲದ ಪತ್ರಕರ್ತರಿಂದ ಕಂಸಾಳೆ ಹಾಡು ಮತ್ತು ಪತ್ರಕರ್ತ ಅನಿಲ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.