ಅಧಿಕಾರಕ್ಕೇರಿದ ಕೂಡಲೇ ಟ್ರಂಪ್‌ಗೆ ಸಂದೇಶ ನೀಡಿದ ತಾಲಿಬಾನ್ ಹೇಳಿದ್ದೇನು ?
ಕಾಬೂಲ್ (ಅಫ್ಘಾನಿಸ್ತಾನ),ಜ.22: ಅಫ್ಘಾನಿಸ್ತಾನದಲ್ಲಿ ಅಮೆರಿಕದ ನೀತಿಯ ಮರುವಿಮರ್ಶೆ ಮಾಡುವಂತೆ ಹಾಗೂ ಅಲ್ಲಿರುವ ಎಲ್ಲ ವಿದೇಶಿ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಬಂಡುಕೋರ ಸಂಘಟನೆ ತಾಲಿಬಾನ್, ನೂತನ ಟ್ರಂಪ್ ಸರಕಾರವನ್ನು ಆಗ್ರಹಿಸಿದೆ.
ಶುಕ್ರವಾರ ಟ್ರಂಪ್ ಅಧಿಕಾರ ಸ್ವೀಕಾರದ ಬೆನ್ನಿಗೇ ತಾಲಿಬಾನ್ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿ, ಹಿಂದಿನ ಅಧ್ಯಕ್ಷರುಗಳಾದ ಬರಾಕ್ ಒಬಾಮಾ ಹಾಗೂ ಜಾರ್ಜ್ ಡಬ್ಲು ಬುಶ್ ನೇತೃತ್ವದ ಸರಕಾರಗಳು ಅನುಸರಿಸಿದ ನೀತಿಗಳನ್ನೇ ನೂತನ ಆಡಳಿತ ಮುಂದುವರಿಸಿದಲ್ಲಿ ಅಫ್ಘಾನಿಸ್ತಾನದಲ್ಲಿ ಹಿಂಸೆ ಮುಂದುವರಿಯಲಿದೆಯೆಂದು ಎಚ್ಚರಿಕೆ ನೀಡಿದೆ.
ಅಮೆರಿಕ ನೇತೃತ್ವದ ಮಿತ್ರಪಡೆಗಳು ಅಫ್ಘಾನಿಸ್ತಾನದ ಮೇಲೆ ನಡೆಸಿದ ದಾಳಿಯಿಂದಾಗಿ ಕಳೆದ 16 ವರ್ಷಗಳಲ್ಲಿ ಭಾರೀ ವಿನಾಶ, ಜೀವಹಾನಿ ಹಾಗೂ ಲಕ್ಷಾಂತರ ಕೋಟಿ ಡಾಲರ್ ನಷ್ಟವನ್ನು ಉಂಟು ಮಾಡಿದೆ. ಅಫ್ಘಾನಿಸ್ತಾನದ ಬಗ್ಗೆ ದ್ವೇಷ ಉಲ್ಬಣಿಸಲೂ ಕಾರಣವಾಗಿದೆಯೆಂದು ಅದು ಹೇಳಿದೆ.
ಈ ಮಧ್ಯೆ ಅಪ್ಘಾನ್ ಸರಕಾರದ ಮುಖ್ಯ ಕಾರ್ಯನಿರ್ವಾಹಕ ಅಬ್ದುಲ್ಲಾ ಅಬ್ದುಲ್ಲಾ ಅವರು, ಭಯೋತ್ಪಾದನೆಯ ವಿರುದ್ಧ ಹೋರಾಡುವ ಹಾಗೂ ಅಫ್ಘಾನಿಸ್ತಾನದಲ್ಲಿ ಅಮೆರಿಕ ಪಡೆಗಳನ್ನು ಉಳಿಸಿಕೊಳ್ಳಲು ಬದ್ಧವಾಗಿರುವೆನೆಂಬ ಟ್ರಂಪ್ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.