ಟೆನಿಸ್‌ಬಾಲ್ ಗಾತ್ರದ ಕಲ್ಲನ್ನು ತೆಗೆದ ನಂತರ ಸಾಮಾನ್ಯ ಜೀವನದತ್ತ ಕಾರ್ಕಳದ ರೋಗಿ
ಮಣಿಪಾಲ, ಜ.22: ಕಾರ್ಕಳದ 46 ವರ್ಷ ವಯಸ್ಸಿನ ಪುರುಷರೊಬ್ಬರ ಮೂತ್ರಪಿಂಡ (ಕಿಡ್ನಿ)ದಲ್ಲಿದ್ದ ಟೆನಿಸ್ ಬಾಲ್ ಗಾತ್ರದ ಕಲ್ಲನ್ನು ಕೆಎಂಸಿಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಿದ್ದು, ರೋಗಿ ಈಗ ಚೇತರಿಸಿಕೊಂಡು ಸಾಮಾನ್ಯ ಜೀವನ ನಡೆಸುತಿದ್ದಾರೆ ಎಂದು ಕೆಎಂಸಿ ವೈದ್ಯಕೀಯ ಅಧೀಕ್ಷಕರಾದ ಡಾ.(ಕರ್ನಲ್) ಎಂ.ದಯಾನಂದ ತಿಳಿಸಿದ್ದಾರೆ.
ಕಾರ್ಕಳದ ಈ ವ್ಯಕ್ತಿ ನೋವಿನಿಂದ ಕೂಡಿದ ಮೂತ್ರವಿಸರ್ಜನೆ ಮತ್ತು ಅಸಂಯಮ ಮೂತ್ರದ ವರ್ತನೆಗೆ ಕೇವಲ ಆರು ದಿನಗಳ ಹಿಂದೆ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಕೆಎಂಸಿಯ ಉಪ ವೈದ್ಯಕೀಯ ಅಧೀಕ್ಷಕರೂ ಆದ ಡಾ. ಪದ್ಮರಾಜ ಹೆಗ್ಡೆ ಅವರು ರೋಗಿಯನ್ನು ಪರೀಕ್ಷಿಸಿ, ಕೆಲವು ಪರೀಕ್ಷೆಗಳನ್ನು ಮಾಡಿದ ಬಳಿಕ ರೋಗಿಯ ಕ್ಷ-ಕಿರಣವನ್ನು ಗಮನಿಸಿದಾಗ 10x8 ಸೆಂಟಿಮೀಟರ್ ಗಾತ್ರದ ಕಲ್ಲನ್ನು ನೋಡಿ ಆಶ್ಚರ್ಯಚಕಿತರಾದರು.
ಡಾ.ಪದ್ಮರಾಜ ಹೆಗ್ಡೆ ನೇತೃತ್ವದ ಮೂತ್ರಶಾಸ್ತ್ರ ವಿಭಾಗದ ಡಾ.ಜೀಶನ್ ಹಮೀದ್, ಡಾ.ಮಂಜುನಾಥ್ ಮತ್ತು ಅರಿವಳಿಕೆ ವಿಭಾಗದ ಪ್ರಾಧ್ಯಾಪಕ ಡಾ.ರಾಮಕುಮಾರ್‌ರನ್ನು ಒಳಗೊಂಡ ವೈದ್ಯಕೀಯ ತಂಡ ಮೂತ್ರಕೋಶದ ಕಲ್ಲನ್ನು ತೆಗೆುಲು ತೆರೆದ ಶಸ್ತ್ರಚಿಕಿತ್ಸೆ ನಡೆಸಿತು.
ಕಲ್ಲನ್ನು ಹೊರತೆಗೆದು ಅದರ ತೂಕ ಪರೀಕ್ಷಿಸಿದಾಗ ಈ ಕಲ್ಲು 530 ಗ್ರಾಂ ತೂಗುತ್ತಿತ್ತು. ಮತ್ತು ಗಾತ್ರದಲ್ಲಿ ಟೆನಿಸ್‌ಬಾಲ್‌ಗಿಂತ ದೊಡ್ಡದಾಗಿತ್ತು. ಮೂತ್ರ ಕೋಶದ ಕಲ್ಲುಗಳಿಂದ ಸಾಮಾನ್ಯವಾಗಿ ಮೂತ್ರಕೋಶದ ನಾಳದಲ್ಲಿ ಅಡಚಣೆ, ಹೊರಗಿನ ವಸ್ತುಗಳ ಸಂಬಂಧಿತ ಮೂತ್ರಕೋಶದ ಕಾರ್ಯನಿರ್ವಹಿಸದಿರುವಿಕೆ ಮತ್ತು ಮೂತ್ರದ ಸೋಂಕು ವಯಸ್ಸಾದ ರೋಗಿಗಳಲ್ಲಿ ಕಂಡುಬರುತ್ತದೆ.
ಈ ರೀತಿಯ ಒಂದು ದೈತ್ಯ ಮೂತ್ರಕೋಶ ಕಲ್ಲು ವೈದ್ಯಕೀಯ ಲೋಕದಲ್ಲಿ ಸಿಕ್ಕಿರುವುದು ತೀರಾ ವಿರಳ. ಮೂತ್ರಕೋಶದ ಕಲ್ಲುಗಳು ವಿಶೇಷವಾಗಿ ಹೆಚ್ಚೆಂದರೆ 100 ಗ್ರಾಂ ತೂಗುವುದು ಸಾಮಾನ್ಯವಾಗಿದೆ. ವಿಶ್ವದಲ್ಲಿ ಈವರೆಗೆ ಪತ್ತೆಯಾಗಿರುವ ಅತೀದೊಡ್ಡ ಗಾತ್ರದ ಕಿಡ್ನಿಕಲ್ಲುಗಳ ಬಗ್ಗೆ ಹುಡುಕಾಡಿದಾಗ ಇದು ನಾಲ್ಕನೇ ಅತೀ ದೊಡ್ಡ ಗಾತ್ರದ ಕಲ್ಲು ಎಂಬುದು ಪತ್ತೆಯಾಯಿತು.
ಭಾರತದಲ್ಲಿ ಲಭ್ಯವಿರುವ ಲೇಖನ, ಪುರಾವೆ ಗಮನಿಸಿದಾಗ ಮಹಾರಾಷ್ಟ್ರದ ಉಲ್ಲಾಸನಗರದಿಂದ ಒಂದು ಮೂತ್ರಕೋಶ ಕಲ್ಲು 800 ಗ್ರಾಂ. ತೂಕವಿ ರುವುದು ಗೊತ್ತಾಗಿದೆ. ಅಂತಾರಾಷ್ಟ್ರೀಯ ಚರಿತ್ರೆಯನ್ನು ಗಮನಿಸಿದರೆ ಕೇವಲ 3 ಮೂತ್ರಕೋಶದ ಕಲ್ಲುಗಳು ಮೇಲೆ ಹೇಳಿದ್ದಕ್ಕಿಂತ ದೊಡ್ಡದಾಗಿರುವುದು ದಾಖಲಾಗಿದೆ. ಅವುಗಳು ಕ್ರಮವಾಗಿ ಚೀನಾ, ಹಂಗೇರಿ ಮತ್ತು ಬ್ರೆಜಿಲ್ ದೇಶಗಳಲ್ಲಿ ಕಂಡುಬಂದಿವೆ.
ಈ ಯಶಸ್ವಿ ಕಾರ್ಯನಿರ್ವಹಣೆಗಾಗಿ ಡಾ. ಪದ್ಮರಾಜ ಹೆಗ್ಡೆ ನೇತೃತ್ವದ ತಂಡವನ್ನು ಡಾ.ಎಂ.ದಯಾನಂದ ಅಭಿನಂದಿಸಿದ್ದಾರೆ. ಕೆಎಂಸಿಯಲ್ಲಿ ಲಭ್ಯ ವಿರುವ ಅತ್ಯಾಧುನಿಕ ಸೌಲಭ್ಯಗಳಿಂದ ಕಠಿಣ ಕಲ್ಲುಗಳನ್ನು ಮುರಿಯುವ ಸಾಮರ್ಥ್ಯ ಎಂಡೋಸ್ಕೋಪಿಕ್ ವಿಧಾನಕ್ಕಿದೆ ಎಂದವರು ತಿಳಿಸಿದ್ದಾರೆ.