ಗ್ರಾಪಂ ದಲಿತ ಅಧ್ಯಕ್ಷೆಗೆ ಕಿರುಕುಳ: ಚಳವಳಿ ರೂಪಿಸಲು ನಿರ್ಧಾರ
ಉಡುಪಿ, ಜ.22 : ಶಿರಿಯಾರ ಗ್ರಾಪಂ ಅಧ್ಯಕ್ಷೆ ದಲಿತ ಮಹಿಳೆ ಜ್ಯೋತಿ ಅವರಿಗೆ ಅಸಹಕಾರ ಹಾಗೂ ಕಿರುಕುಳ ನೀಡಿ ಗ್ರಾಪಂ ಸಭೆಗಳನ್ನು ನಡೆಸಲು ಅಡ್ಡಿ ಮಾಡುತ್ತಿರುವ ವಿದ್ಯಮಾನಗಳ ಬಗ್ಗೆ ದಲಿತ ಸಂಘಟನೆಯ ವಿವಿಧ ಬಣಗಳ ನಾಯಕರು ಮತ್ತು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ನಿಯೋಗ ಇಂದು ಭೇಟಿ ಮಾಡಿ ಮಾತುಕತೆ ನಡೆಸಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ನಿರ್ಧರಿಸಿತು.
ದಲಿತ ಮಹಿಳೆ ಗ್ರಾಪಂ ಅಧ್ಯಕ್ಷೆಯಾಗಿರುವುದನ್ನು ಸಹಿಸದೆ ಈ ರೀತಿಯಲ್ಲಿ ಪಂಚಾಯತ್ ಆಡಳಿತವನ್ನು ಬರ್ಖಾಸ್ತುಗೊಳಿಸಲು ಮುಂದಾಗಿರುವ ವಿದ್ಯಮಾನಗಳ ಬಗ್ಗೆ ಮುಂದಿನ ಹಂತದಲ್ಲಿ ದಲಿತ ಸಂಘಟನೆಗಳು ಹಾಗೂ ದಲಿತ ದಮನಿತರ ಹೋರಾಟ ಸಮಿತಿ ಚಳುವಳಿಯನ್ನು ರೂಪಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಯಿತು.
ಈ ಗ್ರಾಪಂನಲ್ಲಿ ನಡೆದಿರುವ ಹಿಂದಿನ ಹತ್ತು ವರ್ಷಗಳ ಕಾಮಗಾರಿ, ಶೇ.25 ನಿಧಿಯ ಬಳಕೆ ಇತ್ಯಾದಿಗಳ ದಾಖಲೆಗಳನ್ನು ಮಾಹಿತಿ ಹಕ್ಕಿನಲ್ಲಿ ಪಡೆಯುವುದು, ಜಿ.ಪಂ. ಸಿಇಒರನ್ನು ಭೇಟಿಯಾಗಿ ವಾಸ್ತವ ಸ್ಥಿತಿಯ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಗ್ರಾ.ಪಂ.ನ ಸಾಮಾನ್ಯ ಸಭೆಗಳಿಗೆ ಗೈರು ಹಾಜರಾಗುತ್ತಿರುವ ಸದಸ್ಯರುಗಳ ಸದಸ್ಯತ್ವ ರದ್ದುಪಡಿಸುವುದು, ದಲಿತ ದೌರ್ಜನ್ಯದಡಿ ಅಂತವರ ವಿರುದ್ಧ ದೂರು ನೀಡುವುದು, ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಇಲ್ಲಿ ನಡೆಯುವ ರಾಜಕೀಯ ಪ್ರೇರಿತ ದಲಿತ ದೌರ್ಜನ್ಯದ ವಿರುದ್ಧ ಮಧ್ಯಪ್ರವೇಶಿಸಲು ಆಗ್ರಹಿಸುವುದು ಮತ್ತು ಸ್ಥಳೀಯ ರನ್ನು ಸಂಘಟಿಸಿ ಈ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವುದು ಮತ್ತು ಮುಂದಿನ ಹೋರಾಟದಲ್ಲಿ ಜೊತೆಯಾಗುವಂತೆ ಮಾಡುವ ಬಗ್ಗೆ ನಿರ್ಧರಿಸ ಲಾಯಿತು.
ನಿಯೋಗದಲ್ಲಿ ಮುಖಂಡರಾದ ಸುಂದರ ಮಾಸ್ತರ್, ಶ್ಯಾಮರಾಜ ಬಿರ್ತಿ, ಎಸ್.ಎಸ್.ಪ್ರಸಾದ್, ಸುಂದರ ಕಪ್ಪೆಟ್ಟು, ಕೆ.ಫಣಿರಾಜ್, ಪರಮೇಶ್ವರ ಉಪ್ಪೂರು, ವಿಠಲ ತೊಟ್ಟಂ, ವರದರಾಜ್ ಬಿರ್ತಿ, ಅನಂತ ಮಚ್ಚಟ್ಟು, ಆನಂದ ಕಾರೂರು, ದಿನಕರ್ ಎಸ್.ಬೆಂಗ್ರೆ, ಪ್ರಶಾಂತ್, ಪುರಂದರ , ಶ್ಯಾಮ ಸುಂದರ್ ತೆಕ್ಕಟ್ಟೆ, ಸಂಜೀವ ತೆಕ್ಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.