ಸುಳ್ಯದಲ್ಲಿ ಅಂಬಿಗರ ಚೌಡಯ್ಯ ಜಯಂತಿ
ಸುಳ್ಯ , ಜ.22 : ತಾಲೂಕು ನಾಡಹಬ್ಬಗಳ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಕಾರ್ಯಕ್ರಮ ಉದ್ಘಾಟಿಸಿದರು.
ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಉಪನ್ಯಾಸಕ ಸಂಜೀವ ಕುದ್ಪಾಜೆ ವಿಶೇಷ ಉಪನ್ಯಾಸ ನೀಡಿದರು.
12ನೇ ಶತಮಾನದಲ್ಲಿಯೇ ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿ ನಡೆದಿದೆ. ಪಂಡಿತರಿಗೆ ಸೀಮಿತವಾಗಿದ್ದ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಹಲವು ವಚನಕಾರರು ಮಾಡಿದ್ದರು. ಅಂತಹವರಲ್ಲಿ ಬಂಡಾಯ ಸಾಹಿತ್ಯದ ಮೂಲಕ ಕ್ರಾಂತಿ ಮಾಡಿದವರು ಅಂಬಿಗರ ಚೌಡಯ್ಯ. ಶೋಷಣೆ ತುಂಬಿದ ಸಮಾಜದಲ್ಲಿ ಅವರಿಗೆ ಬೆಂಬಲವಾಗಿ ನಿಂತು ದಿಟ್ಟತನ ತೋರಿದ ಅಂಬಿಗರ ಚೌಡಯ್ಯ ಲಿಂಗ ಸಮಾನತೆಯನ್ನು ಪ್ರತಿಪಾದಿಸಿದ್ದಾರೆ. ವಿವಿ ಮಟ್ಟಕ್ಕೆ ಸೀಮಿತವಾಗಿರುವ ಹಲವು ಪೀಠಗಳು ಮಾಡಲು ಆಗದ ಕಾರ್ಯವನ್ನು ಸರ್ಕಾರ ಇಂತಹ ಅಚರಣೆಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಸ್ತುತ್ಯಾರ್ಹ ಎಂದರು.
ಎಪಿಎಂಸಿ ಅಧ್ಯಕ್ಷ ಜಾಕೆ ಮಾಧವ ಗೌಡ ಮಾತನಾಡಿ, ಮಾಡುವ ಕೆಲಸ ಯಾವುದೇ ಇರಲಿ ಅದನ್ನು ಒಳ್ಳೆಯ ರೀತಿಯಲ್ಲಿ ಮಾಡಿದಾಗ ಸಮಾಜ ಅದನ್ನು ಗೌರವಿಸುತ್ತದೆ. ದೇವರೂ ಮೆಚ್ಚುತ್ತಾನೆ. ನಾವು ಶೋಷಣೆಗೆ ಒಳಗಾದರೂ ಅದನ್ನು ಸಹಿಸುತ್ತೇವೆ ಹೊರತು, ಸಮಾಜಕ್ಕೆ ಪ್ರಯೋಜನ ಆಗುವ ನಿಟ್ಟಿನಲ್ಲಿ ಯಾರೂ ಚಿಂತಿಸುತ್ತಿಲ್ಲ. ಇಂತಹ ಕಾರ್ಯಕ್ರಮಗಳನ್ನು ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶಾಲಾ ಕಾಲೇಜುಗಳಲ್ಲಿ ಆಚರಿಸುವಂತಾಗಬೇಕು ಎಂದರು.
ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ ವೇದಿಕೆಯಲ್ಲಿದ್ದರು.
ಉಪ ತಹಶೀಲ್ದಾರ್ ರಾಮಣ್ಣ ನಾಯ್ಕ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಕೆಂಪಲಿಂಗಪ್ಪ ವಂದಿಸಿದರು. ಗ್ರಾಮ ಕರಣಿಕ ತಿಪ್ಪೇಶಪ್ಪ ಕಾರ್ಯಕ್ರಮ ನಿರೂಪಿಸಿದರು.