ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಸಿಪಿಎಂ ದೂರು
ಮಂಗಳೂರು, ಜ.23: ಕೇರಳದಲ್ಲಿ ಸಿಪಿಎಂ ಪಕ್ಷವು ಬಿಜೆಪಿಯ ಕಾರ್ಯಕರ್ತರ ಮೇಲೆ ದಾಳಿ ನಡೆಸುವುದನ್ನು ಮುಂದುವರಿಸಿದರೆ ಕರ್ನಾಟಕದಲ್ಲೂ ಕಮ್ಯುನಿಸ್ಟರನ್ನು ಹಿಡಿದು ಹೊಡೆಯುವ ತಾಕತ್ತು ಬಿಜೆಪಿಗೆ ಇದೆ ಎಂದು ಕೇರಳದ ಕೊಟ್ಟಾಯಂನಲ್ಲಿ ನಡೆದ ಬಿಜೆಪಿ ಸಭೆಯೊಂದರಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ನೀಡಿದ ಹೇಳಿಕೆಯ ವಿರುದ್ಧ ಸಿಪಿಎಂ ದ.ಕ.ಜಿಲ್ಲಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಸಂಸದ ನಳಿನ್ ಕುಮಾರ್ ಕಟೀಲ್ ಹಲವು ಬಾರಿ ಹಿಂಸೆಗೆ ಪ್ರಚೋದನೆ ನೀಡುವ ಭಾಷಣವನ್ನು ಮಾಡುತ್ತಾ ಬಂದಿದ್ದಾರೆ. ಇದು ಹಿಂಸೆಗೆ ಕಾರ್ಯಕರ್ತರಿಗೆ ನೀಡುವ ಪ್ರಚೋದನೆಯಾಗಿದೆ ಎಂದು ಸಿಪಿಎಂ ಪಕ್ಷದ ದ.ಕ.ಜಿಲ್ಲಾ ಸಮಿತಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ನಗರ ಪೋಲೀಸ್ ಆಯುಕ್ತರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದೆ.
ಸಂಸದರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಜಿಲ್ಲೆಯಲ್ಲಿ ಪಕ್ಷದ ಸದಸ್ಯರು ಮತ್ತು ಪಕ್ಷದ ಬೇರೆ ಬೇರೆ ಸಾಮೂಹಿಕ ಸಂಘಟನೆಗಳ ಕಾರ್ಯಕರ್ತರ ಮೇಲೆ ಸಂಘ ಪರಿವಾರ ಮತ್ತು ಬಿಜೆಪಿಯವರು ಹಲ್ಲೆ ನಡೆಸಿದರೆ ಅದಕ್ಕೆ ಸಂಸದರನ್ನು ಹೊಣೆಗಾರನನ್ನಾಗಿ ಮಾಡಬೇಕು ಎಂದು ಸಿಪಿಎಂ ಒತ್ತಾಯಿಸಿದೆ.
ಪಕ್ಷದ ಮುಖಂಡರಾದ ವಸಂತ ಆಚಾರಿ, ಕೆ.ಆರ್.ಶ್ರೀಯಾನ್, ಜೆ.ಬಾಲಕೃಷ್ಣ ಶೆಟ್ಟಿ, ಕೆ.ಯಾದವ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್ ನಿಯೋಗದಲ್ಲಿದ್ದರು.